ಕರ್ನಾಟಕದಲ್ಲಿ ಕಂಡುಬರುವ ಚಿಟ್ಟೆಗಳು - (Butterflies found in Karnataka)
ಕಾಮನ್ ಇಂಪೀರಿಯಲ್ (Common Imperial)
ವೈಜ್ಞಾನಿಕ ಹೆಸರು - ಚೆರಿತ್ರ ಫ್ರೆಜ
ಇದು ಬ್ಲೂಸ್ ಜಾತಿಯ ಚಿಟ್ಟೆ. ಇವುಗಳು ಬಲು ಸುಂದರವಾದ ಸಾಮಾನ್ಯ ಗಾತ್ರದ ಚಿಟ್ಟೆಗಳು. ಈ ಚಿಟ್ಟೆಗಳು ಭಾರತ,
ಶ್ರೀಲಂಕಾ, ಮಲೇಷಿಯಾ ಹಾಗು ಮಯನ್ಮಾರ್ ದೇಶಗಳಲ್ಲಿ ಕಂಡುಬರುತ್ತವೆ. ಈ ಚಿಟ್ಟೆಗಳನ್ನು ನಗರ ಪ್ರದೇಶಗಳಲ್ಲಿ
ನೋಡಲು ಸಾಧ್ಯವಿಲ್ಲ. ಇವುಗಳನ್ನು ನೋಡಬೇಕೆಂದರೆ ಮಲೆನಾಡಿನ
ಕಾಡುಗಳಿಗೇ ಹೋಗಬೇಕು. ಈ ಚಿಟ್ಟೆಗಳು ಬಹಳ ವೇಗವಾಗಿ ಹಾರುತ್ತವೆ. ಇವುಗಳ ರೆಕ್ಕೆಯ ಅಗಲ ಸುಮಾರು ೨೮-೪೨ಮಿಲಿ
ಮೀಟರ್ ನಷ್ಟಿರುತ್ತದೆ. ಇವುಗಳ ರೆಕ್ಕೆಯ ಕೆಳಭಾಗವು ಬಿಳಿ ಬಣ್ಣದಿಂದ ಕೂಡಿರುತ್ತದೆ ಹಾಗು ರೆಕ್ಕೆಯ
ಮೇಲ್ಭಾಗವು ನೀಲೀ ಮಿಶ್ರಿತ ಕಂದು ಬಣ್ಣವನ್ನು ಹೊಂದಿರುತ್ತದೆ. ಕೆಳಭಾಗದ ರೆಕ್ಕೆಯ ಹಿಂಬದಿಯಲ್ಲಿ ಕಪ್ಪು ಪಟ್ಟೆಗಳಿದ್ದು,
ಹಿಂಬದಿಯ ಅಂಚಿನಲ್ಲಿ ಕಣ್ಣುಗಳಂತೆ ಕಾಣುವ ೨ ಕಪ್ಪು ಚುಕ್ಕೆಗಳು ಮತ್ತು ಅವುಗಳ ಮಧ್ಯದಲ್ಲಿ ಒಂದು
ಸಣ್ಣ ಗಾತ್ರದ ಕಪ್ಪು ಚುಕ್ಕೆಯನ್ನು ನಾವು ಕಾಣಬಹುದು. ಈ ಚಿಟ್ಟೆಗಳಿಗೆ ಅವುಗಳ ದೇಹದಷ್ಟೆ ಉದ್ದವಾದ
೨ ಬಾಲಗಳಿರುತ್ತವೆ. ದಾಂಡೇಲಿ ಅರಣ್ಯ ಪ್ರದೇಶದಲ್ಲಿರುವ ಸಾತೊಡ್ಡಿ ಜಲಪಾತದ ಬಳಿ ಈ ಚಿಟ್ಟೆಯನ್ನು
ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ.
ವಿಶೇಷ ಮಾಹಿತಿ: ಇವುಗಳ ಕೆಳಭಾಗದ ರೆಕ್ಕೆಯಲ್ಲಿರುವ ೨ ಕಪ್ಪು ಚುಕ್ಕೆಗಳು ಇವುಗಳ ಕಣ್ಣಿನಂತೆ
ಹಾಗು ಬಾಲಗಳು ಮೀಸೆಯಂತೆ ಕಾಣುತ್ತವೆ. ಈ ಚಿಟ್ಟೆಗಳನ್ನು ತಿನ್ನಲು ಬರುವ ಪ್ರಾಣಿಗಳಿಗೆ ಗೊಂದಲ ಉಂಟಾಗಿ,
ತಲೆಯ ಬದಲಾಗಿ ಇವುಗಳ ಬಾಲವನ್ನು ಕಚ್ಚುತ್ತವೆ. ತಕ್ಷಣ ಈ ಚಿಟ್ಟೆಗಳು ಅಂಥಹ ಪ್ರಾಣಿಗಳಿಂದ ಸುಲಭವಾಗಿ
ತಪ್ಪಿಸಿಕೊಂಡು ಹಾರಿ ಹೋಗುತ್ತವೆ. ಇದು ಪ್ರಕೃತಿಯೇ ಇವುಗಳಿಗೆ ಕೊಟ್ಟಿರುವ ವರ.
ಕಾಮನ್ ಕ್ರೋ (Common crow)
ವೈಜ್ಞಾನಿಕ ಹೆಸರು - ಯುಪ್ಲೊಯ ಕೊರ್
ಇವುಗಳು ದಕ್ಷಿಣ ಆಫ್ರಿಕಾ ಖಂಡದಲ್ಲಿ ಮತ್ತು ಏಶಿಯಾ ಖಂಡದಲ್ಲಿ
ಹೆಚ್ಚಾಗಿ ಕಾಣ ಸಿಗುತ್ತವೆ.ಇವುಗಳು ನಿಂಫಲಿಡೆ ಜಾತಿಗೆ ಸೇರಿವೆ.ಈ ಚಿಟ್ಟೆಗಳ ರೆಕ್ಕೆಯೆ ಬಣ್ಣ ಕಪ್ಪಾಗಿದ್ದು,ಅಂಚಿನಲ್ಲಿ
ಬಿಳಿ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ.ಇವುಗಳ ಮೀಸೆ ,ತಲೆ,ಎದೆ ಮತ್ತು ಹೊಟ್ಟೆಯ ಭಾಗಗಳು ಕಂದು
ಬಣ್ಣದಿಂದ ಕೂಡಿರುತ್ತವೆ.ಈ ಚಿಟ್ಟೆಗಳನ್ನು ಶ್ರೀಲಂಕಾ,ಭಾರತ,ಮಯನ್ಮಾರ್ ಹಾಗು ಆಸ್ಟ್ರೇಲಿಯಾ ದೇಶಗಳಲ್ಲೂ
ನೋಡಬಹುದು.ಇವುಗಳು ತಮ್ಮ ಮೊಟ್ಟೆಗಳನ್ನು ಗಿಡದ ಎಲೆಗಳ ಬದಿಯಲ್ಲಿಡುತ್ತವೆ.ಈ ಮೊಟ್ಟೆಗಳು ಕೊಳವೆ ಆಕಾರವಾಗಿದ್ದು,ಬಿಳಿ
ಬಣ್ಣದಿಂದ ಕೂಡಿರುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಮರಿಹುಳುಗಳು ಕೊಳವೆಯಾಕಾರವಾಗಿದ್ದು ,ಇವುಗಳ
ಮೈ ಮೇಲೆ ಕಪ್ಪು,ಬಿಳಿ ಮತ್ತು ಕಂದು ಬಣ್ಣಗಳ ಪಟ್ಟೆಗಳಿರುತ್ತವೆ.ಮರಿಹುಳುಗಳ ದೇಹದ ಮೇಲ್ಭಾಗದಲ್ಲಿ
೪ ಜೋಡಿ ಮುಳ್ಳಿನಂತಹ ಅಂಗವಿರುವುದನ್ನು ನಾವು ಗಮನಿಸಬಹುದು. ಮಂಗಳೂರಿನಲ್ಲಿರುವ ಪಿಳಿಕುಳದ ಹತ್ತಿರ ಈ ಚಿಟ್ಟೆಯ ಚಿತ್ರವನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ.
ವಿಶೇಷ ಮಾಹಿತಿ: ಈ ಚಿಟ್ಟೆಯನ್ನು ತಿನ್ನಲೆಂದು ಪ್ರಾಣಿಗಳು ಇದನ್ನು ಬಾಯಲ್ಲಿ ಹಿಡಿದ
ಕೂಡಲೆ, ಈ ಚಿಟ್ಟೆಯು
ಸತ್ತಂತೆ ನಟಿಸಿ ತಮ್ಮ ದೇಹದಿಂದ ದ್ರವವನ್ನು
ಬಿಡುತ್ತದೆ.ಇದರಿಂದ
ಆ ಪ್ರಾಣಿಗಳಿಗೆ ವಾಂತಿ ಬರುವಂತಾಗಿ ಈ ಚಿಟ್ಟೆಯನ್ನು ಬಿಟ್ಟುಬಿಡುತ್ತವೆ. ಹೀಗೆ ಈ ಚಿಟ್ಟೆಗಳು ತಮ್ಮ ವೈರಿಗಳಿಂದ
ತಪ್ಪಿಸಿಕೊಳ್ಳುತ್ತವೆ.
ವೈಜ್ಞಾನಿಕ ಹೆಸರು - ಅಕ್ರಾಯಿ ಟರ್ಪ್ಸಿಕೊರೆ
ಟಾವ್ನಿ ಕೊಸ್ಟರ್ (Twany coaster)
ವೈಜ್ಞಾನಿಕ ಹೆಸರು - ಅಕ್ರಾಯಿ ಟರ್ಪ್ಸಿಕೊರೆ
ಈ ಚಿಟ್ಟೆಯು ನಿಂಫಲಿಡೆ ಜಾತಿಗೆ
ಸೇರಿದೆ. ಇವುಗಳು ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ ಮತ್ತು ಸಣ್ಣ ಸಣ್ಣ ಗಿಡಗಳಿರುವ ಜಾಗಗಳಾಲ್ಲಿ
ಕಾಣಸಿಗುತ್ತವೆ. ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಇವು ಕಂಡುಬರುತ್ತವೆ. ಇದರ ಮೀಸೆ ಮತ್ತು ಎದೆ
ಕಪ್ಪು ಬಣ್ಣವನ್ನು ಹೊಂದಿದೆ. ಇದರ ಎದೆಯ ಮೇಲೆ ಬಿಳಿ ಚುಕ್ಕೆಗಳಿರುತ್ತವೆ. ಕೇಸರಿ ಬಣ್ಣದಿಂದ ಕೂಡಿರುವ
ಇದರ ಹೊಟ್ಟೆಯ ಮೇಲೆ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಇದರ ರೆಕ್ಕೆಯ ಉದ್ದಳತೆ ೫೩-೬೪ ಮಿಲಿ ಮೀಟರ್.
ಇದರ ರೆಕ್ಕೆಯು ಕೇಸರಿ ಬಣ್ಣ ಹೊಂದಿದ್ದು ಅಲ್ಲಲ್ಲಿ ಸಣ್ಣ ಕಪ್ಪು ಚುಕ್ಕೆಗಳಿರುತ್ತವೆ. ಈ ಚಿಟ್ಟೆಗಳನ್ನು
ನಾವು ಸಾಮಾನ್ಯವಾಗಿ ಮಳೆಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ವೈರಿಗಳು ಈ ಚಿಟ್ಟೆಯನ್ನು
ಹಿಡಿದ ಕೂಡಲೆ ಈ ಚಿಟ್ಟೆಯು ತನ್ನ ದೇಹದಿಂದ ಹಳದಿ ಬಣ್ಣದ ಎಣ್ಣೆಯಂಥಹ ದ್ರವವನ್ನು ಹೊರಸೂಸುತ್ತದೆ.
ಈ ದ್ರವದ ವಾಸನೆಯಿಂದ ಆ ವೈರಿಗಳು ಇದನ್ನು ಬಿಟ್ಟು ಹೋಗುತ್ತವೆ. ಈ ಚಿತ್ರವನ್ನು ಸೆರೆ ಹಿಡಿದದ್ದು
ಕನಕಪುರ ರಸ್ತೆಯ ಬಳಿ ಇರುವ ಪಿರಮಿಡ್ ವ್ಯಾಲಿಯಲ್ಲಿ.
ವಿಶೇಷ ಮಾಹಿತಿ: ಚಿಟ್ಟೆಗಳು
ತಮ್ಮ ಪಾದದ ಸಹಾಯದಿಂದ ಆಹಾರದ ರುಚಿಯನ್ನು ಸವಿಯುತ್ತವೆ.
ಬ್ಯಾಂಡೆಡ್ ಬ್ಲೂ ಪಿರ್ರೆಟ್ (Banded Blue Pierrot)
ವೈಜ್ಞಾನಿಕ ಹೆಸರು - ಡಿಸ್ಕೊಲಂಪ ಎಥಿಆನ್
ಬ್ಯಾಂಡೆಡ್ ಬ್ಲೂ
ಪಿರ್ರೆಟ್ ಒಂದು ಪುಟ್ಟದಾದ ಚಿಟ್ಟೆ. ಈ ಚಿಟ್ಟೆಯ ರೆಕ್ಕೆಯ ಅಗಲ ೨೦-೨೫ ಮಿಲಿ ಮೀಟರ್. ಇದು ಬ್ಲೂಸ್ ಜಾತಿಗೆ ಸೇರಿದ ಚಿಟ್ಟೆ. ಈ ಬ್ಯಾಂಡೆಡ್ ಬ್ಲೂ
ಪಿರ್ರೆಟ್ ನ ಕೆಳಭಾಗದ ರೆಕ್ಕೆಯು ಬಣ್ಣ ಬಿಳಿ ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಕಪ್ಪು ಬಣ್ಣ ಹೊಂದಿರುತ್ತದೆ.
ಇದರ ಮೀಸೆ ಕಪ್ಪಾಗಿರುತ್ತದೆ. ಇದರ ಎದೆ ಮತ್ತು ಹೊಟ್ಟೆಯ ಮೇಲ್ಭಾಗಗಳು ಕಪ್ಪು ಬಣ್ಣ ಮತ್ತು ಕೆಳಭಾಗವು
ಬಿಳಿ ಬಣ್ಣವನ್ನು ಹೊಂದಿದೆ. ಈ ಬ್ಯಾಂಡೆಡ್ ಬ್ಲೂ ಪಿರ್ರೆಟ್ ಚಿಟ್ಟೆಗೆ ಬಹಳ ಚಿಕ್ಕದಾದ ಕಪ್ಪು ಬಾಲವೂ
ಇರುತ್ತದೆ. ಈ ಚಂದದ ಪುಟ್ಟ ಚಿಟ್ಟೆಯನ್ನು ಭಾರತ, ಶ್ರೀಲಂಕಾ, ಮಯನ್ಮಾರ್, ಮಲೇಶಿಯಾ, ಸಿಂಗಾಪೊರ್,
ಇಂಡೊನೇಷಿಯಾ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ನೋಡಬಹುದು. ಇವುಗಳು ಸಾಮಾನ್ಯವಾಗಿ
ಮಲೆನಾಡಿನಲ್ಲಿ ವಾಸಿಸುತ್ತವೆ. ಇವು ನೆಲಕ್ಕೆ ಹತ್ತಿರವಾಗಿ ಹಾರುತ್ತವೆ. ಕಾಡಗಳಲ್ಲಿ, ನದಿ, ಕೆರೆಗಳ ದಂಡೆಯ ಬಳಿ ಇವುಗಳನ್ನು ನಾವು ಬಹಳಷ್ಟು ಸಂಖ್ಯೆಯಲ್ಲಿ
ನೋಡಬಹುದು. ಈ ಚಿಟ್ಟೆಯ ಮರಿ ಹುಳುಗಳು ಹಸಿರು ಬಣ್ಣ ಹೊಂದಿದ್ದು ಅದರ ಮೈ ಮೇಲೆ ಬಿಳಿ ಬಣ್ಣದ ಕೂದಲಿರುತ್ತವೆ.
ಈ ಮರಿಹುಳು ಖರಜೂರ ಗಿಡದ ಎಳೆಯ ಕಾಂಡವನ್ನು ತಿಂದು ಗಿಡಕ್ಕೆ ತೊಂದರೆ ಕೊಡುತ್ತದೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಶಿವಮೊಗ್ಗದಲ್ಲಿರುವ ಸಕ್ರೆಬಯಲು ಆನೆ ಕ್ಯಾಂಪನ ಬಳಿಯಲ್ಲಿ.
ವಿಶೇಷ ಮಹಿತಿ: ಈ ಬ್ಲೂಸ್ ಜಾತಿಗೆ
ಸೇರಿದ ಕೆಲವು ಮರಿಹುಳುಗಳು ವೈರಿಗಳಿಂದ ರಕ್ಷಣೆ ಪಡೆಯಲು ಇರುವೆಗಳ ಜೊತೆ ವಾಸ ಮಾಡುತ್ತವೆ.ಈ ಮರಿಹುಳುಗಳ
ಹಿಂದಿನ ಒಂದು ಅಂಗದಿಂದ ಸಿಹಿಯಾದ ನೀರಿನ ಹನಿಗಳನ್ನು ಬಿಡುತ್ತವೆ. ಈ ಸಿಹಿಯಾದ ಹನಿಗಳನ್ನು ಇರುವೆ
ತಿನ್ನುತ್ತದೆ.ಇರುವೆಗಳು ಈ ಮರಿಹುಳುಗಳನ್ನು ಅದರ ಶತ್ರುಗಳಿಂದ ಕಾಪಾಡುತ್ತವೆ. ಹೀಗೆ ಇರುವೆ ಮತ್ತು
ಮರಿಹುಳು ಒಂದಕ್ಕೊಂದು ಸಹಾಯ ಮಾಡಿಕೊಂಡಿರುತ್ತವೆ.
ಕಾಮನ್ ಸೈಲರ್ (Common sailor)
ವೈಜ್ಞಾನಿಕ ಹೆಸರು - ನೆಪ್ಟಿಸ್ ಹೈಲಸ್
ಇದು ನೈಂಫಲಿಡ್ ಜಾತಿಗೆ
ಸೇರುವ ಚಿಟ್ಟೆ. ಈ ಕಾಮನ್ ಸೈಲರ್ ಚಿಟ್ಟೆಯನ್ನು ನಾವು ದಕ್ಷಿಣ ಏಷಿಯಾದ ಎಲ್ಲಾ ದೇಶಗಳ್ಲಲ್ಲಿ ಕಾಣಬಹುದು.
ಭಾರತ, ಶ್ರಿಲಂಕ ಮತ್ತು ಮಯನ್ಮಾರ್ ದೇಶಗಳಲ್ಲಿ ಕಾಮನ್ ಸೈಲರ್ ಚಿಟ್ಟೆಗಳು ಸಾಮಾನ್ಯ ಕಂಡುಬರುತ್ತವೆ.ಇದರ ರೆಕ್ಕೆಯ ಮೇಲ್ಭಾಗ
ಕಪ್ಪು ಬಣ್ಣವಾಗಿದ್ದು ಅಲ್ಲಲ್ಲಿ ಬಿಳಿ ಬಣ್ಣ ಹೊಂದಿರುತ್ತದೆ. ಇದರ ರೆಕ್ಕೆಯ ಕೆಳಭಾಗ ಚಿನ್ನದ ಬಣ್ಣ
ಹೊಂದಿದ್ದು,
ಮೇಲ್ಭಾಗದ ರೆಕ್ಕೆಯಂತೆಯೆ ಅಲ್ಲಲ್ಲಿ ಬಿಳಿ ಬಣ್ಣವಿರುತ್ತದೆ.ಈ ಚಿಟ್ಟೆಯ ರೆಕ್ಕೆಯ
ಅಳತೆ ಸುಮಾರು ೫೦-೬೦ mm. ಇದರ ಮೀಸೆ, ತಲೆ,ಎದೆ ಮತ್ತು ಹೊಟ್ಟೆ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೊಟ್ಟೆ ಮತ್ತು ಎದೆಯ ಕೆಳ ಭಾಗ ಮಬ್ಬಾದ
ಬಿಳಿ ಬಣ್ಣವನ್ನು ಹೊಂದಿದೆ. ಈ ಕಾಮನ್ ಸೈಲರ್ ಚಿಟ್ಟೆಗಳನ್ನು ನಾವು ಸಾಮಾನ್ಯವಾಗಿ ಹೂಗಳ ಮೇಲೆ ಮತ್ತು
ಒದ್ದೆ ಇರುವ ನೆಲದ ಮೇಲೆ ಕಾಣಬಹುದು. ಈ ಫೋಟೊ ಕ್ಲಿಕ್ಕಿಸುವಾಗ ಈ ಚಿಟ್ಟೆಯು ಒದ್ದೆ ನೆಲದ ಮೇಲೆ ಕುಳಿತಿತ್ತು.
ಈ ಫೋಟೊ ಕ್ಲಿಕ್ಕಿಸಿದ್ದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ನೈಸ್ ಜಂಕ್ಷನ್ ಹತ್ತಿರ.
ಈ ಚಿಟ್ಟೆಯ ವೈಚಿತ್ರ್ಯವೆನೆಂದರೆ
ಇದರ ರೆಕ್ಕೆಯ ಬಡಿತ ಬಹಳ ಕಡಿಮೆ ಇದ್ದು, ಹಾರಾಡುವಾಗ ಇದರ ರೆಕ್ಕಯು ಸಮತವವಾಗಿರುತ್ತದೆ.
ವಿಶೇಷ ಮಾಹಿತಿ:
ನೈಂಫಲಿಡ್ ಜಾತಿಗೆ ಸೇರುವ ಗಂಡು ಚಿಟ್ಟೆಗಳು ಜಗಳಗಂಟರಾಗಿದ್ದು, ತಮ್ಮ ತಮ್ಮ
ಪ್ರಾಂತ್ಯಗಳನ್ನು ಕಾಪಾಡಿಕೊಳ್ಳಲು ಹೊಡೆದಾಡುತ್ತವೆ.
ಬ್ಲ್ಯಾಕ್ ರಾಜಾ (Black rajah)
ವೈಜ್ಞಾನಿಕ ಹೆಸರು - ಚಾರಕ್ಸಸ್ ಸೊಲೊನ್
ಇದು ನಿಂಫಲಿಡೆ ಜಾತಿಗೆ ಸೇರಿದ ಚಿಟ್ಟೆ. ಇದರ ರೆಕ್ಕಿಯ ಅಗಲ ೭೦ - ೮೦ ಮಿ.ಮಿ ನಷ್ಟು ಇರುತ್ತದೆ.
ಭಾರತ, ಶ್ರೀಲಂಕಾ, ಮಯನ್ಮಾರ್, ಚೀನಾ, ಮಲೇಶಿಯಾ ದೇಶಗಳಲ್ಲಿ ಈ ಚಿಟ್ಟೆಗಳನ್ನು ಕಾಣಬಹುದು.ಈ ಚಿಟ್ಟೆಗಳು
ಬಲು ಅಪರೂಪವಾಗಿ ಕಂಡುಬರುತ್ತವೆ, ಇವುಗಳು ಕಾಡುಗಳಲ್ಲಿ ಮಾತ್ರ ಕಾಣಸಿಗುತ್ತವೆ. ಇವುಗಳಿಗೆ ಹುಣಸೆ
ಹಣ್ಣಿನ ಮರಗಳೆಂದರೆ ಬಲು ಇಷ್ಟ. ಇವುಗಳ ರೆಕ್ಕೆಯ ಮೇಲ್ಭಾಗದ ಬಣ್ಣ ಕಪ್ಪಾಗಿದ್ದು ಕಮಾನಿನಾಕಾರದಲ್ಲಿ
ಹಸಿರು ಬಣ್ಣದ ಚುಕ್ಕೆಗಳಿರುತ್ತವೆ. ಇವುಗಳ ರೆಕ್ಕೆಯ ಹಿಂಭಾಗದಲ್ಲಿ ಎರಡು ಸಣ್ಣಬಾಲವಿದ್ದು, ಈ ಬಾಲಗಳು
ಹೆಣ್ಣು ಚಿಟ್ಟೆಗಳಲ್ಲಿ ಸ್ವಲ್ಪ ಉದ್ದವಾಗಿರುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಕನಕಪುರದ
ಬಳಿ ಇರುವ ಸಂಗಮದಲ್ಲಿ.
ವಿಶೇಷ ಮಾಹಿತಿ: ಚಿಟ್ಟೆಗಳ ಕಾಲಿನಲ್ಲಿ ರುಚಿ ಗ್ರಂಥಿಗಳಿದ್ದು, ಅವುಗಳು ತಮ್ಮ ಆಹಾರದ ರುಚಿಯನ್ನು
ಕಾಲಿನಿಂದ ಸವಿಯುತ್ತವೆ.
ಕಾಮನ್ ಪಿರ್ರೆಟ್ (Common pierrot)
ವೈಜ್ಞಾನಿಕ ಹೆಸರು - ಕಾಸ್ಚುಅಲಿಸ್ ರೊಸಿಮೊನ್
ಇವುಗಳು ಸಣ್ಣ ಗಾತ್ರದ
ಚಿಟ್ಟೆಗಳಾಗಿದ್ದು ಇವುಗಳ ರೆಕ್ಕೆಯ ಅಗಲ ೨೪-೩೨.ಮಿ.ಮಿ ನಷ್ಟು ಇರುತ್ತದೆ. ಇವು ಬ್ಲೂಸ್ ಜಾತಿಗೆ
ಸೇರಿವೆ . ಭಾರತ,
ಮಯನ್ಮಾರ್, ಶ್ರಿಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಈ ಚಿಟ್ಟೆಗಳನ್ನು
ನಾವು ನೋಡಬಹುದು. ಇವುಗಳ ಬಿಳಿ ರೆಕ್ಕೆಯ ಮೇಲಿರುವ ಕಪ್ಪು ಚುಕ್ಕೆಗಳು ಹಾಗು ಗೆರೆಗಳು ಇವುಗಳನ್ನು
ಆಕರ್ಷಕವಾಗಿಸುತ್ತವೆ. ಇವುಗಳ ರೆಕ್ಕೆಯ ಮೇಲ್ಭಾಗದ ಅಂಚಿನಲ್ಲಿ ಕಪ್ಪು ಬಣ್ಣವಿದ್ದು, ರೆಕ್ಕಿಯ ಮಧ್ಯಭಾಗದಲ್ಲಿ ಬಿಳಿ ಬಣ್ಣವಿರುತ್ತದೆ. ಈ ಬಿಳಿ ಭಾಗದಲ್ಲಿಯೂ ಅಲ್ಲಲ್ಲಿ ಸಣ್ಣ
ಸಣ್ಣ ಕಪ್ಪು ಚುಕ್ಕೆಗಳಿರುತ್ತವೆ. ಬೇಸಿಗೆಯ ದಿನಗಳಲ್ಲಿ
ಇವುಗಳು ಒದ್ದೆ ಮಣ್ಣು ಮತ್ತು ಸಗಣಿಯ ಮೇಲೆ ಕುಳಿತು ತೇವಾಂಶ ಹೀರುವುದನ್ನು ನಾವು ಗಮನಿಸಬಹುದು. ಈ
ಚಿತ್ರವನ್ನು ನಾನು ಕ್ಲಿಕ್ಕಿಸಿದ್ದು ರಾಮನಗರದ ಬೆಟ್ಟದಲ್ಲಿ.
ರೆಡ್ ಪಿರ್ರೆಟ್ (Red pierrot)
ವೈಜ್ಞಾನಿಕ ಹೆಸರು - ತಲಿಕಡ ನೈಸಿಯಸ್
ಇವು ಸಣ್ಣ ಗಾತ್ರದ
ಚಿಟ್ಟೆಗಳು.
ಈ ಚಿಟ್ಟೆಗಳು ಭಾರತ, ಶ್ರೀಲಂಕಾ ಮತ್ತು ಮಯನ್ಮಾರ್ ದೇಶಗಳಲ್ಲಿ
ಕಾಣ ಸಿಗುತ್ತವೆ. ಇವುಗಳು ಮಂದ ಗತಿಯಲ್ಲಿ ಹಾರುತ್ತವೆ. ಇವುಗಳ ಮೇಲ್ಭಾಗದ ರೆಕ್ಕೆಯು ಕಪ್ಪು ಬಣ್ಣ ಹೊಂದಿದ್ದು, ಹಿಂದಿನ
ಅಂಚಿನಲ್ಲಿ ಕೇಸರಿ ಬಣ್ಣವನ್ನು ಹೊಂದಿದೆ. ಇವುಗಳ ಮೇಲ್ಭಾಗದ ರೆಕ್ಕೆಯ ಅಂಚಿನ
ಸುತ್ತಲೂ ಇರುವ ಬಿಳಿ ಚುಕ್ಕೆಗಳು ಈ ಚಿಟ್ಟೆಗಳನ್ನು ಇನ್ನೂ ಮನಮೋಹಕವಾಗಿ ಕಾಣುವಂತೆ ಮಾಡುತ್ತವೆ.
ಇದರ ಕೆಳಭಾಗದ ರೆಕ್ಕೆಯು ಪ್ರಮುಖವಾಗಿ ಬಿಳಿ ಬಣ್ಣವನ್ನು ಹೊಂದಿದ್ದು, ಮುಂಭಾಗದ ರೆಕ್ಕೆಯ ಅಂಚು ಕಪ್ಪು ಬಣ್ಣವನ್ನೂ, ಹಿಂಭಾಗದ ರೆಕ್ಕೆಯ
ಅಂಚು ಕೇಸರಿ ಬಣ್ಣವನ್ನೂ ಹೊಂದಿವೆ. ಇದರ ಹೊಟ್ಟೆ ಮತ್ತು ಎದೆಯ ಮೇಲ್ಭಾಗ
ಕಪ್ಪು ಮತ್ತು ಕೆಳಭಾಗವು ಬಿಳಿ ಬಣ್ಣದಿಂದ ಕೂಡಿವೆ. ಇವುಗಳ ರೆಕ್ಕೆಯ ಅಗಲ
೩೦-೩೬ ಮಿಲಿ ಮೀಟರ್. ಈ ಚಿತ್ರವನ್ನು ನಾನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಬಳಿಯಲ್ಲಿ.
ವಿಶೇಷ ಮಾಹಿತಿ: ಕೆಲವು
ಚಿಟ್ಟೆಗಳು ಅವುಗಳ ಕಾಲಿನಲ್ಲಿರುವ ಸಣ್ಣ ಕೂದಲಿನಿಂದ ತಮ್ಮ ಮೀಸೆಯನ್ನು ಸ್ವಚ್ಛ ಮಾಡಿಕೊಳ್ಳುತ್ತವೆ.
ಯೆಲ್ಲೊ ಪ್ಯಾನ್ಸಿ (yellow pansy)
ವೈಜ್ಞಾನಿಕ ಹೆಸರು - ಜುನೊನಿಯಾ ಹೈರಿಟಾ
ಇವುಗಳು ಬಹಳ ಆಕರ್ಷಕವಾದ
ಚಿಟ್ಟೆ. ಇವುಗಳ ರೆಕ್ಕೆಯ ಮೇಲಿರುವ ಹಳದಿ ಬಣ್ಣ , ಆ ಬಣ್ಣದ ಮೇಲೆ ಅಲ್ಲಲ್ಲಿ ಕಾಣುವ ನೇರಳೆ
ಬಣ್ಣ ಹಾಗು ರೆಕ್ಕೆಯ ಅಂಚಿನಲ್ಲಿ ಕಾಣುವ ಚಿತ್ತಾರವಾದ
ಕಪ್ಪು ಬಣ್ಣ ಎಲ್ಲರನ್ನು ಇವುಗಳೆಡೆಗೆ ಆಕರ್ಷಿಸುತ್ತದೆ. ಇವುಗಳು ನಿಂಫಲಿಡ್ಸ್ ಜಾತಿಗೆ ಸೇರಿವೆ.
ಇವುಗಳ ರೆಕ್ಕೆಯ ಅಗಲ ೪೫-೬೦ ಮಿ.ಮಿ. ಇವುಗಳು ಆಫ್ರಿಕಾ ಹಾಗು ದಕ್ಷಿಣ ಏಷಿಯಾಗಳಲ್ಲಿ ಕಂಡುಬರುತ್ತವೆ. ಇವು ಸಾಧಾರಣವಾಗಿ ಬಲು ವೇಗವಾಗಿ ಹಾರುತ್ತವೆ. ಇವುಗಳು ನಗರ
ಪ್ರದೇಶಗಳಲ್ಲಿ ಸಿಗುವುದು ಅಪರೂಪವೇ ಸರಿ. ಈ ಚಿಟ್ಟೆಗಳಿಗೆ ಚಂಡು ಹೂವುಗಳೆಂದರೆ ಬಲು ಇಷ್ಟ. ಇವುಗಳು
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಾಗು ಕಾಡಿನ ಅಂಚಿನಲ್ಲಿ ಕಾಣಸಿಗುತ್ತವೆ. ಈ ಚಿತ್ರವನ್ನು ಸೆರೆ ಹಿಡಿದದ್ದು ಕನಕಪುರ ರಸ್ತೆಯಲ್ಲಿನ
ನೈಸ್ ರಸ್ತೆ ಜಂಕ್ಷನ್ ಬಳಿ.ಈ ಜಾತಿಯ ಗಂಡು ಚಿಟ್ಟೆಗಳು
ಪ್ರಾಂತ್ಯಕ್ಕಾಗಿ ಬೇರೆ ಚಿಟ್ಟೆಗಳ ಜೊತೆ ಜಗಳವಾಡುತ್ತವೆ.
ಕಾಮನ್ ಫ಼ೊರ್ ರಿಂಗ್ (Common four ring)
ವೈಜ್ಞಾನಿಕ ಹೆಸರು - ಎಪ್ಥಿಮಾ ಹುಬ್ನೆರಿ
ಇವು ನಿಂಫಲಿಡೆ ಜಾತಿಯ ಚಿಟ್ಟೆಗಳು. ಇವುಗಳು ಭಾರತ, ಮಯನ್ಮಾರ್, ಮಲೇಷಿಯಾ ಮತ್ತು ಇಂಡೊನೇಶಿಯಾ
ದೇಶಗಳಲ್ಲಿ ಕಂಡುಬರುತ್ತವೆ. ಇವುಗಳ ರೆಕ್ಕೆಯ ಅಗಲ ಸುಮಾರು ೪೦ - ೪೪ ಮಿ.ಮಿ. ಇವುಗಳು ನಗರ ಪ್ರದೇಶದಲ್ಲಿ
ಮತ್ತು ಬಯಲು ಸೀಮೆಗಳಲ್ಲಿ ಕಂಡುಬರುವುದಿಲ್ಲ. ಈ ಚಿಟ್ಟೆಗಳು ಮಲೆನಾಡಿನಲ್ಲಿ ಬಲು ಸಾಮಾನ್ಯವಾಗಿ ಕಂಡುಬರುತ್ತವೆ.
ಇವುಗಳ ರೆಕ್ಕೆಯ ಮೇಲ್ಭಾಗ ಕಂದು ಬಣ್ಣ ಹೊಂದಿದ್ದು, ರೆಕ್ಕೆಯ ತುದಿಗಳಲ್ಲಿ ಸಣ್ಣದಾದ ೪ ಉಂಗುರಾಕಾರದ
ಚುಕ್ಕೆಗಳಿರುತ್ತವೆ. ಆದ್ದರಿಂದ ಇವುಗಳಿಗೆ ಕಾಮನ್ ಫ಼ೊರ್ ರಿಂಗ್ ಎಂಬ ಹೆಸರು ಬಂದಿರಬಹುದು. ಇವುಗಳ
ರೆಕ್ಕೆಯ ಕೆಳಭಾಗವು ಬಿಳಿ ಬಣ್ಣದಿಂದ ಕೂಡಿದ್ದು, ಅಲ್ಲಲ್ಲಿ ಸಣ್ಣ ಸಣ್ಣ ಕಂದು ಪಟ್ಟೆಗಳಿರುತ್ತವೆ.
ಇವುಗಳ ಮೀಸೆ, ಎದೆ ಮತ್ತು ಹೊಟ್ಟೆಯ ಭಾಗಗಳು ಕಂದು ಬಣ್ಣ ಹೊಂದಿರುತ್ತವೆ. ಈ ಚಿಟ್ಟೆಯ ಪೋಟೊ ತೆಗೆದದ್ದು
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ.
ವಿಶೇಷ ಮಾಹಿತಿ: ಚಿಟ್ಟೆಗಳ ಮೈ ಬಿಸಿ ಸುಮಾರು ೮೫ ಫೇರೆನ್
ಹೀಟ್ ನಷ್ಟು ಇರಬೇಕು, ಇಲ್ಲವಾದಲ್ಲಿ ಇವುಗಳು ಬಹಳ ಮಂದವಾಗುತ್ತವೆ. ಆದ್ದರಿಂದ ಸಾಮಾನ್ಯವಾಗಿ ಮಳೆಗಾಲದ
ದಿನಗಳಲ್ಲಿ ಚಿಟ್ಟೆಗಳು ಕಾಣುವುದಿಲ್ಲ.
ಲೆಮನ್ ಎಮಿಗ್ರೆಂಟ್ (lemon emigrant)
ವೈಜ್ಞಾನಿಕ ಹೆಸರು - ಕಾಟೊಪಿಸಿಲಿಯಾ ಪೊಮೊನಾ
ಈ ಚಿಟ್ಟೆಗಳು ಏಷಿಯಾ ಮತ್ತು ಆಸ್ರ್ಟೆಲಿಯಾ ಖಂಡಗಳಲ್ಲಿ ಕಂಡುಬರುತ್ತವೆ.
ಇವುಗಳ ರೆಕ್ಕೆಯ ಮೇಲ್ಭಾಗದ ಬಣ್ಣ ಹಳದಿಯಾಗಿದ್ದು ಅಲ್ಲಲ್ಲಿ ಕಪ್ಪು ಕಲೆ ಮತ್ತು ಬಿಳಿ ಚುಕ್ಕೆಗಳನ್ನು
ನೋಡಬಹುದು. ಇವುಗಳ ಮೀಸೆಯ ಬಣ್ಣ ಕೆಂಪಾಗಿರುತ್ತದೆ.
ಇವುಗಳ ತಲೆ, ಎದೆ ಮತ್ತು ಹೊಟ್ಟೆಯ ಭಾಗಗಳು ಹಳದಿ ಬಣ್ಣವನ್ನು ಹೊಂದಿರುತ್ತವೆ. ಇವುಗಳು ಬಹಳ ಚುರುಕಾಗಿ
ಹಾರುತ್ತವೆ. ಇವುಗಳು ತಮ್ಮ ಮೊಟ್ಟೆಗಳನ್ನು ಗಿಡದ ಎಲೆಯ ಕೆಳಭಾಗದಲ್ಲಿ ಇಡುತ್ತವೆ. ಈ ಮೊಟ್ಟೆಗಳು
೩ - ೪ ದಿನಗಳಲ್ಲಿ ಒಡೆದು ಕೀಡಿಗಳು ಹೊರ ಬರುತ್ತವೆ. ಈ ಕೀಡಿಗಳು ಹಸಿರು ಮಿಶ್ರಿತ ಹಳದಿ ಬಣ್ಣವನ್ನು
ಹೊಂದಿರುತ್ತವೆ. ಈ ಚಿಟ್ಟೆಗಳಂತೆಯೆ ಕಾಣುವ ಮೊಟಲ್ಡ್ ಎಮಿಗ್ರೆಂಟ್ ನ ರೆಕ್ಕೆಗಳು ಬಿಳಿ ಬಣ್ಣದಾಗಿದ್ದು
ಅವುಗಳನ್ನು ನಾವು ನಗರ ಪ್ರದೇಶಗಳಲ್ಲಿ ಕಾಣಬುಹುದಾಗಿದೆ. ಆದರೆ ಲೆಮನ್ ಎಮಿಗ್ರೆಂಟ್ ಚಿಟ್ಟೆಗಳನ್ನು
ಕಾಣುವುದು ಅಪರೂಪವೇ ಸರಿ. ಈ ಚಿಟ್ಟೆಯ ಫೋಟೊವನ್ನು
ತೆಗೆದದ್ದು ನಮ್ಮ ಬೆಂಗಳೂರಿನ ಲಾಲ್ಬಾಗ್ ನಲ್ಲಿ.
ವಿಶೇಷ ಮಾಹಿತಿ: ಕೆಲವು ಜಾತಿಯ ಚಿಟ್ಟೆಗಳು ಗಂಟೆಗೆ ೧೨ ಮೈಲಿಗಳಷ್ಟು
ವೇಗವಾಗಿ ಹಾರುತ್ತವೆ.
ಪಾಯಿಂಟೆಡ್ ಸಿಲಿಯೆಟ್ ಬ್ಲೂ (Pointed Ciliate Blue)
ವೈಜ್ಞಾನಿಕ ಹೆಸರು - ಅಂಥೆನೆ ಲೈಕೈನಿನ
ಇದು ಸಣ್ಣ ಗಾತ್ರದ ಚಿಟ್ಟೆ. ಈ ಚಿಟ್ಟೆಯು ಬ್ಲೂಸ್ ಜಾತಿಗೆ
ಸೇರಿದೆ.ಇದರ ಮೀಸೆಯು ಕಪ್ಪು ಬಣ್ಣದಿಂದ ಕೂಡಿದ್ದು, ತುದಿಯಲ್ಲಿ ಕಂದು ಬಣ್ಣವನ್ನು ಹೊಂದಿದೆ. ಇದರ ತಲೆ, ಎದೆ ಮತ್ತು ಹೊಟ್ಟೆಯ ಮೇಲ್ಭಾಗಗಳು ಕಂದು ಬಣ್ಣವನ್ನು ಹೊಂದಿವೆ. ಈ ಚಿಟ್ಟೆಯ ಎದೆ ಮತ್ತು ಹೊಟ್ಟೆಯ ಕೆಳಭಾಗವು ಬಿಳಿ ಬಣ್ಣದ್ದಾಗಿದೆ. ಇದರ ಮೇಲ್ಭಾಗದ ರೆಕ್ಕೆಯ ಬಣ್ಣ ನೀಲಿ. ಕೆಳಭಾಗದ ರೆಕ್ಕೆಯು ಕಂದು
ಬಣ್ಣ ಹೊಂದಿದ್ದು ಅಲ್ಲಲ್ಲಿ ಬಿಳಿ ಬಣ್ಣದ ಪಟ್ಟಿಗಳಿರುತ್ತವೆ. ಈ ಚಿಟ್ಟೆಗಳ
ಹಿಂಬದಿಯ ರೆಕ್ಕೆಯ ಕೆಳಭಾಗದಲ್ಲಿ ಕೇಸರಿ ಬಣ್ಣದ ಚುಕ್ಕೆಯನ್ನು ನೋಡಬಹುದು. ಈ ಚಿಟ್ಟೆಗಳ ರೆಕ್ಕೆಯ ಅಗಲ ೨೦-೨೪ ಮಿಲಿ ಮೀಟರ್. ಈ ಚಿಟ್ಟೆಗಳ ರೆಕ್ಕೆಯ ತುದಿಯು ಸ್ವಲ್ಪ ಚೂಪಾಗಿರುತ್ತವೆ, ಆದ್ದರಿಂದಲೇ
ಈ ಚಿಟ್ಟೆಗಳಿಗೆ ಪಾಯಿಂಟೆಡ್ ಸಿಲಿಯೆಟ್ ಬ್ಲೂ ಎಂಬ ಹೆಸರು ಬಂದಿರಬಹುದು. ಸಾಮಾನ್ಯವಾಗಿ ಗಂಡು ಚಿಟ್ಟೆಗಳ ರೆಕ್ಕೆಯ ಅಂಚು ಹೆಣ್ಣು ಚಿಟ್ಟೆಗಳ ರೆಕ್ಕೆಯ ಅಂಚಿಗಿಂತ
ಚೂಪಾಗಿರುತ್ತವೆ. ಈ ಚಿಟ್ಟೆಗಳನ್ನು ನಾವು ವದ್ದೆ ನೆಲದ ಮೇಲೆ ನೋಡಬಹುದು.ಈ ಚಿಟ್ಟೆಯು ವದ್ದೆ ನೆಲದ ಮೇಲೆ ಕುಳಿತಾಗ ಇದನ್ನು ನಾನು ನನ್ನ ಕ್ಯಾಮರದಲ್ಲಿ ಸೆರೆ ಹಿಡಿದೆ.
ಈ ಚಿಟ್ಟೆಯು ಬಲು ಅಪರೂಪವಾಗಿದ್ದು, ನಗರ ಪ್ರದೇಶಗಳಲ್ಲಿ
ಇವುಗಳನ್ನು ಕಾಣುವುದು ಆಶ್ಚರ್ಯವೇ ಸರಿ.
ವಿಶೇಷ ಮಾಹಿತಿ: ಚಿಟ್ಟೆಗಳಿಗೆ ಶ್ವಾಸಕೋಶವಿರುವುದಿಲ್ಲ.
ಕಾಮನ್ ಜೆಸಿಬೆಲ್ (Common jezebel)
ವೈಜ್ಞಾನಿಕ ಹೆಸರು - ಡೆಲೈಸ್ ಯುಕರಿಸ್
ಇದು ಪೈರಿಡ್ ಜಾತಿಗೆ ಸೇರಿದ
ಚಿಟ್ಟೆ. ಈ ಕಾಮನ್ ಜೆಸಿಬೆಲ್ ಚಿಟ್ಟೆಯನ್ನು ನಾವು ದಕ್ಷಿಣ ಏಷಿಯಾದ ಎಲ್ಲಾ ದೇಶಗಳಲ್ಲೂ ಕಾಣಬಹುದು.
ಭಾರತ, ಶ್ರಿಲಂಕಾ, ಮಯನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಕಾಮನ್ ಜೆಸಿಬೆಲ್ ಚಿಟ್ಟೆಗಳು ಸಾಮಾನ್ಯವಾಗಿ
ಕಂಡುಬರುತ್ತವೆ.ಈ ಚಿಟ್ಟೆಯು ಮರಭೂಮಿಗಳಲ್ಲಿ ಕಾಣಿಸುವುದಿಲ್ಲ. ಜೆಸಿಬೆಲ್ ಚಿಟ್ಟೆಗಳನ್ನು ನಾವು ನಗರ
ಪ್ರದೇಶಗಳಲ್ಲೂ ಕಾಣಬಹುದು. ಜೆಸಿಬೆಲ್ ಚಿಟ್ಟೆಗಳನ್ನು ನಾವು ನಮ್ಮ ಹೂದೋಟಗಳಲ್ಲಿಯೂ ಕಾಣಬಹುದು. ಈ
ಚಿಟ್ಟೆಗಳು ಸಾಮಾನ್ಯವಾಗಿ ಬಹು ಎತ್ತರದಲ್ಲಿ ಹಾರಾಡುತ್ತವೆ. ಇವುಗಳು ಕುಳಿತುಕೊಂಡಾಗ ತಮ್ಮ ರೆಕ್ಕೆಗಳನ್ನು
ಮಡಿಚುತ್ತವೆ, ಆಗ ಇವುಗಳ ಕೆಳಗಿನ ರೆಕ್ಕೆಯ ಆಕರ್ಷಕ
ಬಣ್ಣವನ್ನು ಕಾಣಬಹುದು. ಇದರ ಆಕರ್ಷಕ ಬಣ್ಣ ಇದಕ್ಕೆ ಶತ್ರುವಾಗಿದೆ. ಇದರ ಆಕರ್ಷಕ ಬಣ್ಣ ಇದರ ಶತ್ರುಗಳಿಗೆ
ಈ ಚಿಟ್ಟೆಯನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.
ಈ ಚಿಟ್ಟೆಯ ಮಲ್ಭಾಗದ ರೆಕ್ಕೆಯು ಬಹಳ ಮಂದ ಬಣ್ಣ ಹೊಂದಿರುತ್ತದೆ, ಆದ್ದರಿಂದ ಈ ಚಿಟ್ಟೆಯು
ಹಾರಾಡುವಾಗ ಇದರ ಶತ್ರುಗಳಿಗೆ ಈ ಚಿಟ್ಟೆಯನ್ನು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸವೇ ಸರಿ.ಈ ಚಿಟ್ಟೆಯ
ಮೀಸೆ, ತಲೆ, ಎದೆ ಮತ್ತು ಹೊಟ್ಟೆಯ ಭಾಗಗಳು ಬಿಳಿ ಬಣ್ಣದಿಂದ ಕೂಡಿರುತ್ತವೆ. ಇದರ ತಲೆ ಮತ್ತು ಎದೆಯ
ಭಾಗಗಳಲ್ಲಿ ಕಪ್ಪು ಕೂದಲಿರುತ್ತವೆ. ಇದರ ರೆಕ್ಕೆಯ ಅಗಲ ೬೬-೮೩ ಮಿಲಿ ಮೀಟರ್.
ಕಾಮನ್ ಜೆಸಿಬೆಲ್ ಚಿಟ್ಟೆಗಳು
೧೦-೨೦ ಮೊಟ್ಟೆಗಳನ್ನು ಇಡುತ್ತವೆ. ಇವುಗಳು ತಮ್ಮ
ಮೊಟ್ಟೆಯನ್ನು ಗಿಡಗಳ ಎಲೆಗಳ ಕೆಳಗೆ ಇಡುತ್ತವೆ. ಈ ಮೊಟ್ಟೆಗಳಿಂದ ಹೊರಬರುವ ಮರಿಹುಳು ಹಳದಿ ಮಿಶ್ರಿತ
ಕಂದು ಬಣ್ಣ ಹೊಂದಿರುತ್ತದೆ. ಈ ಮರಿಹುಳುಗಳ ತಲೆಯು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಈ ಮರಿಹುಳುಗಳನ್ನು
ನಾವು ಆಗಸ್ಟ್ ತಿಂಗಳಿನಲ್ಲಿ ನೋಡಬಹುದು.
ವಿಶೇಷ ಮಾಹಿತಿ: ಈ ಚಿಟ್ಟೆಯು ಮರಿಹುಳವಾಗಿದ್ದಾಗ
ವಿಷವುಳ್ಳ ಆಹಾರವನ್ನು ಸೇವಿಸಿರುತ್ತದೆ, ಆದ್ದರಿಂದ ಇದು ಬಹಳ ಆಕರ್ಶಕ ಬಣ್ಣವನ್ನು ಹೊಂದಿರುತ್ತದೆ.
ಈ ಚಿಟ್ಟೆಯ ಆಕರ್ಶಕ ಬಣ್ಣವು ಅವುಗಳನ್ನು ತಿನ್ನುಲು ಬರುವಂಥಹ ಕ್ರಿಮಿ, ಕೀಟ ಮತ್ತು ಪಕ್ಷಿಗಳಿಗೆ
ತಾನು ರುಚಿಯಾದ ಆಹಾರವಲ್ಲವೆಂದು ಸೂಚಿಸುತ್ತದೆ.
ಚಾಕೊಲೇಟ್ ಪ್ಯಾನ್ಸಿ (Chocolate pansy)
ವೈಜ್ಞಾನಿಕ ಹೆಸರು - ಜುನೊನಿಯಾ ಇಫಿಟಾ
ಇವುಗಳ ರೆಕ್ಕೆಯ ಅಗಲ ಸುಮಾರು ೫೦ - ೮೦ ಮಿ.ಮಿ. ಈ ಚಿಟ್ಟೆಗಳು ನಿಂಫಲಿಡ್ಸ್
ಜಾತಿಗೆ ಸೇರಿವೆ . ಈ ಚಿಟ್ಟೆಗಳ ರೆಕ್ಕೆಯ ಮೇಲಿನ ಭಾಗವೂ ಕಂದು ಬಣ್ಣದಿಂದ ಕೂಡಿರುತ್ತದೆ. ಮೇಲ್ಭಾಗದ ರೆಕ್ಕೆಯ ಅಂಚಿನಲ್ಲಿ ಪುಟ್ಟ ಗಾತ್ರದ ದುಂಡಾಕಾರದ ಚುಕ್ಕಿಗಳಿರುತ್ತವೆ.
ಈ ಚಿಟ್ಟೆಗಳ ಮೇಲ್ಭಾಗದ ರೆಕ್ಕೆಯ ಅಂಚಿನಲ್ಲಿ ೨ ಕಡು ಕಂದು ಬಣ್ಣದ ಗೆರೆಗಳಿರುತ್ತವೆ. ಇವುಗಳ ಮೀಸೆ
, ತಲೆ, ಎದೆ ಮತ್ತು ಹೊಟ್ಟೆಯ ಭಾಗಗಳೂ ಕೂಡ ಕಡು ಕಂದು ಬಣ್ಣವನ್ನು ಹೊಂದಿರುತ್ತದೆ. ಇವುಗಳು ಸಾಮಾನ್ಯವಾಗಿ
ಮಲೆನಾಡಿನಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಇವುಗಳು ದಕ್ಷಿಣ ಮತ್ತು ಮಧ್ಯ ಭಾಗದಲ್ಲಿ ಕಂಡುಬರುತ್ತವೆ. ಇವುಗಳು ಬಹಳ ಬಿರುಸಾಗಿ
ವೇಗವಾಗಿ ಹಾರುತ್ತವೆ. ಮಾಗಿದ ಹಣ್ಣು, ಮರದ ತೊಗಟೆಗಳು ಮತ್ತು ಸಗಣಿಯ ಬಳಿ ಈ ಚಿಟ್ಟೆಗಳು ಸಾಮಾನ್ಯವಾಗಿ
ಕಂಡುಬರುತ್ತವೆ.
ವಿಶೇಷ ಮಾಹಿತಿ: ಈ ಚಿಟ್ಟೆಗಳ ಮುಂದಿನ ೨ ಕಾಲುಗಳು ಪುಟ್ಟದಾಗಿದ್ದು ತುದಿಯಲ್ಲಿ
ಬ್ರಷ್ ನಂತೆ ತುಪ್ಪುಳವನ್ನು ಹೊಂದಿವೆ. ಆದ್ದರಿಂದ ಈ ಚಿಟ್ಟೆಗಳಿಗೆ ೪ ಕಾಲುಗಳಿದ್ದಂತೆ ಕಾಣುತ್ತವೆ.
ಬಾರೊನೆಟ್ (Baronet)
ವೈಜ್ಞಾನಿಕ ಹೆಸರು - ಯುಥಾಲಿಯ ನೈಸ್
ಈ ಚಿಟ್ಟೆಗಳು ನಿಂಫಲಿಡ್ಸ್ ಜಾತಿಗೆ ಸೇರಿವೆ. ಈ ಚಿಟ್ಟೆಗಳ ರೆಕ್ಕೆಯ ಅಗಲ ೬೦ - ೭೦ ಮಿ.ಮಿ.
ನಷ್ಟು. ಭಾರತ ಮತ್ತು ಶ್ರಿಲಂಕಾ ದೇಶದಲ್ಲಿ ಇವುಗಳನ್ನು ನೋಡಬಹುದು. ಈ ಚಿಟ್ಟೆಗಳ ಮೇಲ್ಭಾಗದ ರೆಕ್ಕೆಯು
ಬಹಳ ಆಕರ್ಷಕವಾದ ಕೇಸರಿ ಮಿಶ್ರಿತ ಹಳದಿ ಬಣ್ಣವನ್ನು ಹೊಂದದ್ದು ಅಲ್ಲಲ್ಲಿ ಕಪ್ಪು ಬಣ್ಣದ ಚುಕ್ಕೆಗಳನ್ನು
ಹೊಂದಿವೆ. ಇವುಗಳ ಮೀಸೆ ಕಪ್ಪು ಬಣವಾಗಿದ್ದು ತಲೆ,
ಎದೆ ಮತ್ತು ಹೊಟ್ಟೆ ಕಂದು ಬಣ್ಣದಿಂದ ಕೂಡಿರುತ್ತದೆ.
ಸೂಕ್ಷ್ಮವಾಗಿ ಗಮನಿಸಿದರೆ ಮೇಲ್ಭಾಗದ ರೆಕ್ಕೆಯ ಅಂಚಿನಲ್ಲಿ ಬಿಳಿ ಬಣ್ಣದ ಪಟ್ಟೆಗಳನ್ನು ಕಾಣಬಹುದು.
ಕೆಳಭಾಗದ ರೆಕ್ಕೆಗಳು ಕೆಂಪು ಬಣ್ಣವಾಗಿದ್ದು ಮಧ್ಯದಲ್ಲಿ ಬಿಳಿ ಬಣ್ಣದ ಪಟ್ಟೆಯನ್ನು ಹೊಂದಿರುತ್ತವೆ.
ಇವುಗಳು ಬಲು ಅಪರೂಪವಾಗಿ ಕಂಡುಬರುತ್ತವೆ. ನಗರ ಪ್ರದೇಶದಲ್ಲಿ ಈ ಚಿಟ್ಟೆಗಳು ಕಂಡುಬರುವುದಿಲ್ಲ. ಈ
ಚಿಟ್ಟೆಗಳು ಬಲು ವೇಗವಾಗಿ ಹಾರಬಲ್ಲವು. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಕನಕಪುರದ ಒಂದು ಹಳ್ಳಿಯಲ್ಲಿ.
ವಿಶೇಷ ಮಾಹಿತಿ: ಹಗಲು ಹೊತ್ತಿನ್ನಲ್ಲಿ ಮರಿಹುಳುಗಳು ಪೊರೆಯನ್ನು ಕಳಚಿ ಚಿಟ್ಟೆಯಾಕಾರಕ್ಕೆ
ಬಂದಾಗ ಅವುಗಳನ್ನು ಹಕ್ಕಿಗಳು ಅಥವಾ ಹಲ್ಲಿಗಳು ತಿಂದುಬಿಡುತ್ತವೆ. ಆದ್ದರಿಂದ ಬಹಳಷ್ಟು ಮರಿಹುಳುಗಳು ಶತ್ರುಗಳಿಗೆ ತಾವು ಕಾಣಬಾರದೆಂದು ಸಂಜೆ ಹೊತ್ತಿನಲ್ಲಿ
ಪೊರೆಯನ್ನು ಕಳಚಿ ಹೊರಬರುತ್ತವೆ .
ಪಯೊನೀರ್ (Pioneer)
ವೈಜ್ಞಾನಿಕ ಹೆಸರು - ಅನಫೈಸ್ ಔರೊಟ
ಇದು ಪೈರಿಡ್ ಜಾತಿಗೆ ಸೇರಿದ ಚಿಟ್ಟೆ. ಈ ಚಿಟ್ಟೆಗಳು ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ
ಕಂಡುಬರುತ್ತವೆ. ಇವುಗಳ ಮೀಸೆಯು ಕಪ್ಪು ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಬಿಳಿ ಚುಕ್ಕೆಗಳನ್ನು ಹೊಂದಿರುತ್ತದೆ. ಇವುಗಳ ತಲೆ, ಎದೆ ಮತ್ತು ಹೊಟ್ಟೆಯ ಭಾಗಗಳು ನೀಲಿ ಮಿಶ್ರಿತ
ಬೂದು ಬಣ್ಣವನ್ನು ಹೊಂದಿವೆ. ಇದರ ರೆಕ್ಕೆಯ ಅಗಲ ೪೦ - ೫೫ ಮಿ.ಮಿ. ಇವುಗಳ ಹಿಂಭಾಗದ ರೆಕ್ಕೆಯ ಕೆಳಗೆಭಾಗದಲ್ಲಿ
ಬಿಳಿ ಬಣ್ಣದ ಪಟ್ಟೆಗಳಿರುತ್ತವೆ. ಮುಂಭಾಗದ ರೆಕ್ಕೆಯ ಕೆಳಭಾಗದಲ್ಲಿ ಬಿಳಿ ಬಣ್ಣದ ಮೇಲೆ ಕಪ್ಪು ಪಟ್ಟೆಗಳಿರುತ್ತವೆ.
ಇವುಗಳ ರೆಕ್ಕಯ ಅಗಲ ಸುಮಾರು ೪೦ - ೫೫ ಮಿ.ಮಿ. ನಷ್ಟು. ಈ ಚಿಟ್ಟೆಗಳು ವೇಗವಾಗಿ ಹಾರುತ್ತವೆ. ಈ ಚಿಟ್ಟೆಗಳು
ಅತಿ ಚಳಿ ಹಾಗು ಅತಿ ಬೇಸಿಗೆ ಇರುವಂಥಹ ಪ್ರದೇಶದಲ್ಲಿ ವಾಸಿಸುವುದಿಲ್ಲ. ಈ ಚಿಟ್ಟೆಗಳು ಒಂದು ಬಾರಿಗೆ
೨೦ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಹೊರಬರುವ
ಮರಿಹುಳುಗಳ ತಲೆ ಕಪ್ಪು ಬಣ್ಣದಿಂದ ಕೂಡುದ್ದು, ದೇಹ ಹಸಿರು ಬಣ್ಣವನ್ನು ಹೊಂದಿರುತ್ತದೆ. ಈ ಚಿಟ್ಟೆಯು
ನಮ್ಮ ಮನೆಯ ಹಿತ್ತಲಿನಲ್ಲಿ ವಿಶ್ರಾಂತಿಸುತ್ತಿದ್ದಾಗ ಇದರ ಚಿತ್ರವನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದೆ.
ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಬೆಂಗಳೂರಿನಲ್ಲಿ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.
ವಿಶೇಷ ಮಾಹಿತಿ: ಬಹಳಷ್ಟು ಚಿಟ್ಟೆಗಳ ಮೈ ಬಣ್ಣವು
ತಾಪಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಈ ಚಿತ್ರದಲ್ಲಿರುವ ಚಿಟ್ಟೆಯ ರೆಕ್ಕೆಯ ಬಣ್ಣ ಬೇಸಿಗೆ ಕಾಲಕ್ಕೆ
ತಕ್ಕ ಹಾಗಿದೆ . ಚಳಿಗಾಲದಲ್ಲಿ ಇದರ ರೆಕ್ಕೆಯ ಹಳದಿ ಬಣ್ಣವಿರುವ ಭಾಗವು ಬಿಳಿಯಾಗಿರುತ್ತದೆ.
ಗ್ರಾಸ್ ಡೀಮನ್ (Grass demon)
ವೈಜ್ಞಾನಿಕ ಹೆಸರು - ಉಡಸ್ಪಸ್ ಫೊಲಸ್
ಇದು ಒಂದು ಸಣ್ಣ ಗಾತ್ರದ ಚಿಟ್ಟೆ. ಈ ಚಿಟ್ಟೆಯು ಸ್ಕಿಪ್ಪರ್
ಜಾತಿಗೆ ಸೇರುತ್ತದೆ. ಇದು ಶುಂಠಿ ಮತ್ತು ಅರಿಶಿಣ ಬೆಳೆಗೆ ಉಪದ್ರಕಾರಿಯಾಗಿದೆ. ಈ ಚಿಟ್ಟೆಯ ರೆಕ್ಕೆಯ ಅಳತೆ ಸುಮಾರು ೪-೪.೮ ಸೆ.ಮಿ. ಇದರ ಹಿಂಬದಿಯ
ರೆಕ್ಕೆಯು ಕಪ್ಪು ಬಣ್ಣ ಹೊಂದ್ದಿದ್ದು ಅಲ್ಲಲ್ಲಿ ದೊಡ್ಡ ದೊಡ್ಡ ಅರೆಪಾರದರ್ಶಕವಾದ ಬಿಳಿ ಚುಕ್ಕೆಗಳನ್ನು
ಹೊಂದಿರುತ್ತದೆ. ಇದರ ಮುಂದಿನ ರೆಕ್ಕೆಯೂ ಕೂಡಾ ಕಪ್ಪು ಬಣ್ಣದಿಂದ ಕೂಡಿದ್ದು
ಅಲ್ಲಲ್ಲಿ ಸಣ್ಣ ಸಣ್ಣ ಅರೆಪಾರದರ್ಶಕವಾದ ಬಿಳಿ ಚುಕ್ಕೆಗಳನ್ನು ಹೊಂದಿದೆ.ಈ ಚಿಟ್ಟೆಯನ್ನು ನಾವು ಶ್ರಿಲಂಕಾ, ಭಾರತ, ಮಯನ್ಮಾರ್, ಚೀನಾ, ಥೈಲ್ಯಾಂಡ್,
ಮಲೇಶಿಯಾ, ಇಂಡೊನೇಶಿಯಾ,ಆಸ್ಟ್ರೇಲಿಯಾ
ದೇಶಗಳಲ್ಲಿ ಕಾಣಬಹುದು.ಈ ಚಿಟ್ಟೆಗಳು ಮೆಳೆಗಾಲದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ
ಕಂಡುಬರುತ್ತವೆ. ಈ ಚಿಟ್ಟೆಗಳು ಬೆಟ್ಟಗಾಡುಗಳಲ್ಲಿ ಬಹಳಷ್ಟು ಕಾಣಸಿಗುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಹತ್ತಿರದಲ್ಲಿ.
ಗ್ರಾಸ್ ಡಿಮನ್ ಚಿಟ್ಟೆಯು ಬಹಳ ಧೈರ್ಯಶಾಲಿ. ಇವುಗಳು ಪೊದೆಗಳಲ್ಲಿ,
ಮರದ ಕೆಳಗೆ ಹಾರಾಡುವುದು ಸಾಮಾನ್ಯ. ಈ ಗ್ರಾಸ್ ಡಿಮನ್
ಚಿಟ್ಟೆಗಳು ನೆಲಕ್ಕೆ ಹತ್ತಿರವಾಗಿ ಹಾರಾಡುತ್ತವೆ ಮತ್ತು ಇವುಗಳು ಹಾರಾಡುವ ಪಥ ಅನಿಶ್ಚಿತ.
ಈ ಚಿಟ್ಟೆಗಳಿಗೆ ಮಕರಂದವೆಂದರೆ ಬಹಳ ಪ್ರೀತಿ.
ವಿಶೇಷ ಮಾಹಿತಿ : ಇವುಗಳ proboscis ( ನಾಲಗೆ/ಮಕರಂದವನ್ನು
ಹೀರುವ ಅಂಗ) ಅದರ ದೇಹಕ್ಕಿಂತಲೂ ಉದ್ದವಾಗಿರುತ್ತದೆ. ಆದ್ದರಿಂದ ಇವುಗಳಿಗೆ ಹೂವಿನ ಮಕರಂದವನ್ನು ಹೀರುವುದು ಬಹಳ ಸುಲಭದ ಕೆಲಸ.
ಕಾಮನ್ ಲೆಪರ್ಡ್ (Common leapord)
ವೈಜ್ಞಾನಿಕ ಹೆಸರು - ಫಲಂತ ಫಲಂತ
ಇದು ನಿಂಫಲಿಡ್ಸ್ ಜಾತಿಯ ಚಿಟ್ಟೆ. ಇವು ಸಾಧಾರಣ ಗಾತ್ರದ ಚಿಟ್ಟೆಗಳು.ಇವುಗಳ ರೆಕ್ಕೆಯ ಅಗಲ ೫೦-೫೫
ಮಿಲಿ ಮೀಟರ್. ಇವುಗಳ ರೆಕ್ಕೆಯ ಮೇಲ್ಭಾಗದ ಬಣ್ಣ ಕಂದು. ಈ ರೆಕ್ಕೆಗಳ ಮೇಲೆ ಕಪ್ಪು ಬಣ್ಣದ ಚುಕ್ಕೆಗಳಿರುತ್ತವೆ.
ಇವುಗಳ ಕೆಳಭಾಗದ ರೆಕ್ಕಯು ಕಂದು ಬಣ್ಣ ಹೊಂದಿದ್ದು ಅಂಚಿನಲ್ಲಿ ನೀಲಿ ಬಣ್ಣವನ್ನು ಹೊಂದಿರುತ್ತದೆ.
ಆಫ್ರಿಕಾ ಮತ್ತು ದಕ್ಷಿಣ ಏಷಿಯಾ ಖಂಡಗಳಲ್ಲಿ ಇವುಗಳು ಕಂಡುಬರುತ್ತವೆ. ಈ ಚಿಟ್ಟೆಗಳು ಬಿಸಿಲಿನಲ್ಲಿ
ಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತವೆ. ನೆರಳಿನಲ್ಲಿ ಇವುಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಇವುಗಳು
ಸಾಮಾನ್ಯವಾಗಿ ಹೂಗಳ ಮೇಲೆ ಕುಳಿತಾಗ ತಮ್ಮ ರೆಕ್ಕೆಯನ್ನು ಹರಡುತ್ತವೆ. ಈ ಚಿಟ್ಟೆಗಳು ಬಹಳ ಚುರುಕಾಗಿ
ಹಾರುತ್ತವೆ. ಇವುಗಳನ್ನು ಪಟ್ಟಣಗಳಲ್ಲಿ ಕಾಣುವುದು ಬಲು ಅಪರೂಪ. ಶಿವಗಂಗೆ ಬೆಟ್ಟದಲ್ಲಿ ತೆಗೆದೆ ಚಿತ್ರವಿದು.
ಮಳೆಗಾಲದಲ್ಲಿ ಇವುಗಳ ಸಂಖ್ಯೆ ಬಹಳ ಕಡಿಮೆ.
ವಿಶೇಷ ಮಾಹಿತಿ: ಈ ಚಿಟ್ಟೆಗಳು ತಮ್ಮ ಪ್ರಾಂತ್ಯವನ್ನು ಕಾಪಡಿಕೊಳ್ಳಲು ಬೇರೆ ಚಿಟ್ಟೆಗಳನ್ನು
ಅಟ್ಟಿಸಿಕೊಂಡು ಹೋಗಿ ತಮ್ಮ ಪ್ರಾಂತ್ಯದಿಂದ ಹೊರಗೆ ಹೋಗುವಂತೆ ಮಾಡುತ್ತವೆ.
ಈ ಚಿಟ್ಟೆಗಳು ನಮ್ಮ ದೇಶದ ಎಲ್ಲಾ ರಾಜ್ಯದಲ್ಲೂ ಕಂಡುಬರುತ್ತವೆ. ಇವುಗಳ ರೆಕ್ಕೆಯ ಅಗಲ ಸರಿ ಸುಮಾರು ೪೦ - ೬೫ ಮಿ.ಮಿ. ಇವುಗಳು ಚಳಿಗಾಲದಲ್ಲಿ ಬಿಟ್ಟು ಬೇರೆ ಎಲ್ಲಾ ಕಾಲದಲ್ಲಿಯೂ ಕಂಡುಬರುತ್ತವೆ. ಇವುಗಳು ಪೈರಿಡ್ಸ್ ಜಾತಿಗೆ ಸೇರಿವೆ. ಇವುಗಳು ಬೇಸಿಗೆ ಕಾಲದಲ್ಲಿ ತಮ್ಮ ರೆಕ್ಕೆಯ ಬಣ್ಣವನ್ನು ಕೆಳೆದುಕೊಂಡು ಮಬ್ಬಾಗಿ ಕಾಣುತ್ತವೆ. ಇವುಗಳ ಮೀಸೆ ಮತ್ತು ಹೊಟ್ಟೆಯ ಭಾಗಗಳು ಕಪ್ಪು ಬಣ್ಣವನ್ನು ಹೊಂದಿವೆ. ತಲೆ ಮತ್ತು ಎದೆಯ ಭಾಗಗಳು ನೀಲಿ ಮಿಶ್ರಿತ ಬೂದು ಬಣ್ಣವನ್ನು ಹೊಂದಿವೆ. ಇವುಗಳ ಕೆಳಭಾಗದ ರೆಕ್ಕೆಯ ಬಣ್ಣ ಹಳದಿಯಾಗಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ. ಕೆಳಭಾಗದ ರೆಕ್ಕೆಯ ಮೇಲ್ಭಾಗದ ಮಧ್ಯದಲ್ಲಿ ಬಿಳಿ ಬಣ್ಣವಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಇದರ ಮೇಲ್ಭಾಗದ ರೆಕ್ಕೆಯು ಬಿಳಿ ಬಣ್ಣವಾಗಿದ್ದು ಅಂಚಿನಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಈ ಚಿಟ್ಟೆಗಳು ಸಾಧಾರಣವಾಗಿ ಎಲೆಗಳ ಕೆಳಗೆ ಗುಂಪಾಗಿ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳಿಂದ ಹೊರಬಂದ ಕೀಡಿ ಹುಳುಗಳು ಕೂಡಾ ಜೊತೆ ಜೊತೆಯಾಗಿ ಗುಂಪಿನಲ್ಲೇ ವಾಸಿಸುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಹತ್ತಿರದಲ್ಲಿರುವ ಪಾರ್ಕನಲ್ಲಿ(ಉದ್ಯಾನ).
ಇದು ಪೈರಿಡ್ ಜಾತಿಗೆ ಸೆರಿದ ಚಿಟ್ಟೆ. ಈ
ಚಿಟ್ಟೆಗಳು ಏಷಿಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಂಡುಬರುತ್ತವೆ. ಈ ಚಿಟ್ಟೆಗಳು ಸಾಮಾನ್ಯವಾಗಿ ಹುಲ್ಲುಗಾವಲಿನಲ್ಲಿ
ಕಂಡುಬರುತ್ತವೆ. ಈ ಚಿಟ್ಟೆಗಳು ಸಾಮಾನ್ಯವಾಗಿ ಎತ್ತರದಲ್ಲಿ ಹಾರುವುದಿಲ್ಲಾ. ಈ ಚಿಟ್ಟೆಗಳ ರೆಕ್ಕೆಯ
ಬಣ್ಣ ಹಳದಿಯಾಗಿದ್ದು ರೆಕ್ಕೆಯ ಮೇಲ್ಭಾಗದ ತುದಿಯಲ್ಲಿ ಕಂದು ಮಿಶ್ರಿತ ಹಳದಿ ಬಣ್ಣವನ್ನು ಕಾಣಬಹುದು.
ಇವುಗಳ ಮೀಸೆಯ ಬಣ್ಣ ಬೂದು ಮಿಶ್ರಿತ ಹಳದಿಯಾಗಿದ್ದು, ಎದೆ ಮತ್ತು ಹೊಟ್ಟೆಯ
ಭಾಗಗಳು ಹಳದಿ ಬಣ್ಣವನ್ನು ಹೊಂದಿವೆ. ಇದರ ರೆಕ್ಕೆಯ ಉದ್ದಗಲ ಸರಿ ಸುಮಾರು ೩೫ - ೪೫ ಮಿ.ಮಿ. ಇವುಗಳು
ತಮ್ಮ ಬಿಳಿ ಬಣ್ಣದ ಮೊಟ್ಟೆಗಳನ್ನು ಗಿಡದ ಎಲೆಗಳ ಮೇಲೆ ಇಡುತ್ತವೆ. ಈ ಮೊಟ್ಟೆಗಳಿಂದ ಹೊರಬಂದ ಮರಿಹುಳು
ಕೊಳವೆಯಾಕಾರವಾಗಿದ್ದು, ಹಸಿರು ಬಣ್ಣವನ್ನು ಹೊಂದಿರುತ್ತದೆ. ಮರಿಹುಳು ಮೊಟ್ಟೆಯಿಂದ
ಹೊರಬಂದು ಮೊಟ್ಟೆಯ ಚಿಪ್ಪನ್ನು ತಿಂದು ಶಕ್ತಿ ಪಡೆದು ನಂತರ ಗಿಡದ ಎಲೆಗಳನ್ನು ತಿಂದು ಗಿಡಗಳಿಗೆ ಭಾದಕವಾಗುತ್ತವೆ.
ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಜೆ.ಪಿ.ನಗರದ ಒಂದು ಉದ್ಯಾನವನದಲ್ಲಿ.
ವಿಶೇಷ
ಮಾಹಿತಿ : ಪೈರಿಡ್ಸ್ ಜಾತಿಗೆ ಸೇರಿದ ಕೆಲ ಮರಿಹುಳುಗಳು ವೈರಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು
ಬಾಯಿಯಿಂದ ಗಬ್ಬುನಾರುವ ದ್ರವವನ್ನು ವಾಂತಿಮಾಡುತ್ತವೆ. ಈ ವಾಸನೆಯನ್ನು ತಡೆಯಲಾರದೆ ವೈರಿ ಹುಳುಗಳು
ಓಡಿ ಹೋಗುತ್ತವೆ.
ಕಾಮನ್ ಗುಲ್ (Common gull )
ವೈಜ್ಞಾನಿಕ ಹೆಸರು - ಸಿಪೊರಾ ನೆರಿಸ್ಸಾ
ಈ ಚಿಟ್ಟೆಗಳು ನಮ್ಮ ದೇಶದ ಎಲ್ಲಾ ರಾಜ್ಯದಲ್ಲೂ ಕಂಡುಬರುತ್ತವೆ. ಇವುಗಳ ರೆಕ್ಕೆಯ ಅಗಲ ಸರಿ ಸುಮಾರು ೪೦ - ೬೫ ಮಿ.ಮಿ. ಇವುಗಳು ಚಳಿಗಾಲದಲ್ಲಿ ಬಿಟ್ಟು ಬೇರೆ ಎಲ್ಲಾ ಕಾಲದಲ್ಲಿಯೂ ಕಂಡುಬರುತ್ತವೆ. ಇವುಗಳು ಪೈರಿಡ್ಸ್ ಜಾತಿಗೆ ಸೇರಿವೆ. ಇವುಗಳು ಬೇಸಿಗೆ ಕಾಲದಲ್ಲಿ ತಮ್ಮ ರೆಕ್ಕೆಯ ಬಣ್ಣವನ್ನು ಕೆಳೆದುಕೊಂಡು ಮಬ್ಬಾಗಿ ಕಾಣುತ್ತವೆ. ಇವುಗಳ ಮೀಸೆ ಮತ್ತು ಹೊಟ್ಟೆಯ ಭಾಗಗಳು ಕಪ್ಪು ಬಣ್ಣವನ್ನು ಹೊಂದಿವೆ. ತಲೆ ಮತ್ತು ಎದೆಯ ಭಾಗಗಳು ನೀಲಿ ಮಿಶ್ರಿತ ಬೂದು ಬಣ್ಣವನ್ನು ಹೊಂದಿವೆ. ಇವುಗಳ ಕೆಳಭಾಗದ ರೆಕ್ಕೆಯ ಬಣ್ಣ ಹಳದಿಯಾಗಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ. ಕೆಳಭಾಗದ ರೆಕ್ಕೆಯ ಮೇಲ್ಭಾಗದ ಮಧ್ಯದಲ್ಲಿ ಬಿಳಿ ಬಣ್ಣವಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಇದರ ಮೇಲ್ಭಾಗದ ರೆಕ್ಕೆಯು ಬಿಳಿ ಬಣ್ಣವಾಗಿದ್ದು ಅಂಚಿನಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಈ ಚಿಟ್ಟೆಗಳು ಸಾಧಾರಣವಾಗಿ ಎಲೆಗಳ ಕೆಳಗೆ ಗುಂಪಾಗಿ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳಿಂದ ಹೊರಬಂದ ಕೀಡಿ ಹುಳುಗಳು ಕೂಡಾ ಜೊತೆ ಜೊತೆಯಾಗಿ ಗುಂಪಿನಲ್ಲೇ ವಾಸಿಸುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಹತ್ತಿರದಲ್ಲಿರುವ ಪಾರ್ಕನಲ್ಲಿ(ಉದ್ಯಾನ).
ವಿಶೇಷ
ಮಾಹಿತಿ : ಪೈರಿಡ್ಸ್ ಜಾತಿಗೆ ಸೇರಿದ ಕೆಲವು ಚಿಟ್ಟೆಗಳು
ವಲಸೆ ಹೋಗುತ್ತವೆ. ಈ ಚಿಟ್ಟೆಗಳು ಗುಂಪು ಗುಂಪಾಗಿ ಹಾರುತ್ತವೆ ಮತ್ತು ರಾತ್ರಿ ಹೊತ್ತಿನಲ್ಲಿ ಕಾಡು
ಅಥವಾ ಪೊದೆಗಳಲ್ಲಿ ಆಶ್ರಯ ಪಡೆದು ಮತ್ತೆ ಮರುದಿನ ಮುಂಜಾನೆ ತಮ್ಮ ಪಯಣವನ್ನು ಬೆಳೆಸುತ್ತವೆ.
ಕಾಮನ್ ಇವನಿಂಗ್ ಬ್ರೌನ್ (Common evening brown)
ವೈಜ್ಞಾನಿಕ ಹೆಸರು - ಮೇಲನಿಟಿಸ್ ಲೆಡಾ
ಇದರ
ಹೆಸರೆ ಹೇಳುವ ಹಾಗೆ ಈ ಚಿಟ್ಟೆಗಳು ಸಂಜೆ ಹೊತ್ತಿನಲ್ಲಿ ಕಂಡುಬರುತ್ತವೆ. ಈ ಚಿಟ್ಟೆಗಳು ಬ್ರೌನ್ಸ್
ಜಾತಿಗೆ ಸೇರಿವೆ. ಇವುಗಳು ಅನಿಯಮಿತ ಪಥದಲ್ಲಿ ಹಾರುತ್ತವೆ. ಇವುಗಳು ಆಫ್ರಿಕಾ, ದಕ್ಷಿಣ ಏಷಿಯಾ ಮತ್ತು ಆಷ್ಟ್ರೇಲಿಯಾ ಪ್ರದೇಶದಲ್ಲಿ ಕಂಡುಬರುತ್ತವೆ. ಇವುಗಳು ಸಾಮಾನ್ಯವಾಗಿ
ಕಾಡು ಮತ್ತು ಹಳ್ಳಿಗಳಲ್ಲಿ ಕಂಡುಬರುತ್ತವೆ. ಈ ಚಿಟ್ಟೆಗಳು ಸಂಜೆ ಹೊತ್ತಿನಲ್ಲಿ ದೀಪದ ಬೆಳಕಿಗೆ ಆಕರ್ಷಿತವಾಗಿ
ಮನೆಗಳ ಹತ್ತಿರ ಬರುತ್ತವೆ. ಇವುಗಳು ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಕಂಡುಬರುತ್ತವೆ. ಇವುಗಳು ಸಾಮಾನ್ಯವಾಗಿ
ತೇವವಾದ ಮಣ್ಣಿನ ಹತ್ತಿರ ಹಾಗು ಕೊಳೆತ ಎಲೆಗಳ ಹತ್ತಿರ ಕಂಡುಬರುತ್ತವೆ. ಇವುಗಳ ರೆಕ್ಕೆಯ ಅಗಲ ಸರಿ
ಸುಮಾರು ೬೦ - ೮೦ ಮಿ. ಮಿ ಯಷ್ಟು. ಈ ಚಿತ್ರದಲ್ಲಿರುವ ಚಿಟ್ಟೆಯ ರೆಕ್ಕೆಯ ಮೇಲಿರುವ ಕಪ್ಪು ಚುಕ್ಕೆಗಳು
ಮೆಳೆಗಾಲದಲ್ಲಿ ಮಾತ್ರ ಕಂಡುಬರುತ್ತವೆ. ಬೇಸಿಗೆ ಕಾಲ ಬರುತ್ತಿದ್ದಂತೆ ಈ ಚುಕ್ಕೆಗಳು ಇವುಗಳ ರೆಕ್ಕೆಯ
ಮೇಲಿಂದ ಮಾಯವಾಗುತ್ತವೆ. ಈ ಚಿತ್ರವನ್ನು ತೆಗೆದದ್ದು ನಮ್ಮ ಮನೆಯ ಕೈದೋಟದಲ್ಲಿ.
ವಿಶೇಷ
ಮಾಹಿತಿ : ಸಾಮಾನ್ಯವಾಗಿ ಬಹಳಷ್ಟು ಚಿಟ್ಟೆಗಳು ಸೂರ್ಯನ ಬೆಳಕಿಗೆ ಹೊರಬರುತ್ತವೆ ಆದರೆ ಬ್ರೌನ್ಸ್
ಜಾತಿಗೆ ಸೇರಿದ ಚಿಟ್ಟೆಗಳು ಮೋಡ ಕವಿದ ವಾತಾವರಣದಲ್ಲೂ ಹೊರಗೆ ಕಾಣಸಿಗುತ್ತವೆ.
ಕಾಮನ್ ಗ್ರಾಸ್ ಯೆಲ್ಲೊ (Common grass yellow)
ವೈಜ್ಞಾನಿಕ ಹೆಸರು - ಯುರೆಮಾ ಹೆಕಬೆ
ಕಾಮನ್ ಸಿಲ್ವರ್ ಲೈನ್ (Common silverline)
ವೈಜ್ಞಾನಿಕ ಹೆಸರು - ಸಿಗರಿಟಿಸ್ ವಲ್ಕಾನಸ್
ಈ
ಚಿಟ್ಟೆಗಳು ನಗರ ಪ್ರದೇಶದಲ್ಲಿ ಕಾಣುವುದು ಅಪರೂಪವೇ ಸರಿ, ಭಾರತ,
ಥೈಲ್ಯಾಂಡ್ ಮತ್ತು ಶ್ರೀಲಂಕಾ ದೇಶದಲ್ಲಿ ಈ ಚಿಟ್ಟೆಗಳು ಕಂಡುಬರುತ್ತವೆ. ಈ ಚಿಟ್ಟೆಗಳ
ರೆಕ್ಕೆಯ ಕೆಳಭಾಗದಲ್ಲಿ ಕೇಸರಿ ಮತ್ತು ಹಳದಿ ಮಿಶ್ರಿತ ಬಿಳಿ ಪಟ್ಟೆಗಳಿರುತ್ತವೆ. ಈ ಕೇಸರಿ ಬಣ್ಣದ
ಪಟ್ಟೆಯ ಮೇಲೆ ಬೆಳ್ಳಿ ಬಣ್ಣದ ಪಟ್ಟೆಗಳಿರುತ್ತವೆ. ರೆಕ್ಕೆಯ ಮೇಲ್ಭಾಗವು ಕಪ್ಪು ಬಣ್ಣವಿದ್ದು ಕೆಳ
ತುದಿಯ ಅಂಚಿನಲ್ಲಿ ಕೇಸರಿ ಬಣ್ಣದ ಪಟ್ಟೆಗಳಿರುತ್ತವೆ.
ರೆಕ್ಕೆಯ ಮೇಲ್ಭಾಗದ ಮೇಲಿನ ರೆಕ್ಕಿಯಲ್ಲಿ ಅಲ್ಲಲ್ಲಿ ಕೇಸರಿ ಬಣ್ಣದ ಪಟ್ಟೆಗಳನ್ನು ನೋಡಬಹುದು. ರೆಕ್ಕೆಯ ಕೆಳಭಾಗದ ತುದಿಯಲ್ಲಿ ೨ ಕಪ್ಪು ಚುಕ್ಕೆಗಳಿದ್ದು,
ಚಿಕ್ಕದಾದ ೪ ಬಾಲಗಳಿರುತ್ತವೆ. ಈ
ಬಾಲವು ಕಪ್ಪು ಬಣ್ಣವಿದ್ದು ತುದಿಯಲ್ಲಿ ಬಿಳಿ ಬಣ್ಣ ಹೊಂದಿರುತ್ತದೆ. ಇದರ ಮೀಸೆಯು ಕಪ್ಪು ಬಣ್ಣವನ್ನು
ಹೊಂದಿದೆ. ಇವುಗಳ ಎದೆ ಮತ್ತು ಹೊಟ್ಟೆಯ ಭಾಗಗಳು ಬಿಳಿ ಮಿಶ್ರಿತ ಹಳದಿ ಬಣ್ಣವನ್ನು ಹೊಂದಿದ್ದು,
ಹೊಟ್ಟೆಯ ಭಾಗದಲ್ಲಿ ಕೇಸರಿ ಪಟ್ಟೆಗಳಿರುತ್ತವೆ. ಈ ಚಿಟ್ಟೆಗಳು ಬಲು ವೇಗವಾಗಿ ಹಾರುತ್ತವೆ. ಈ ಚಿತ್ರವನ್ನು
ಕ್ಲಿಕ್ಕಿಸಿದ್ದು ಕನಕಪುರದ ಬಳಿ ಇರುವ ಪಿರೆಮಿಡ್ ವ್ಯಾಲಿಯಲ್ಲಿ .
ವಿಶೇಷ
ಮಾಹಿತಿ : ಅಂಟಾರ್ಟಿಕಾ ಖಂಡದಲ್ಲಿ ಮಾತ್ರ ಚಿಟ್ಟೆಗಳು ಕಂಡುಬರುವುದಿಲ್ಲಾ.
ಕೋನಾಕಾರದ ಕ್ಯಾಶ್ಟರ್ (Angled castor)
ವೈಜ್ಞಾನಿಕ ಹೆಸರು - ಅರೈಡ್ನೆ ಅರೈಡ್ನೆ
ಇದು
ನಿಂಫಲಿಡ್ಸ್ ಜಾತಿಗೆ ಸೇರಿದ ಚಿಟ್ಟೆ. ಈ ಚಿಟ್ಟೆಯ ರೆಕ್ಕೆಯ ಅಗಲ ಸುಮಾರು ೪೫-೬೦ ಮಿಲಿ ಮೀಟರ್. ಈ
ಚಿಟ್ಟೆಯ ರೆಕ್ಕೆಗಳು ಕೆಂಪು ಮಿಶ್ರಿತ ಕಂದು ಬಣ್ಣದಿಂದ ಕೂಡಿದ್ದು ಅಲ್ಲಲ್ಲಿ ಓರೆಯಾಕಾರದ ಕಪ್ಪು
ಗೆರೆಗಳನ್ನು ಹೊಂದಿವೆ.ಈ ಚಿಟ್ಟೆಯ ಮುಂಭಾಗದ ರೆಕ್ಕೆಯ ತುದಿಯಲ್ಲಿ ಬಿಳಿ ಬಣ್ಣದ ಚುಕ್ಕೆಗಳಿರುತ್ತವೆ.
ಈ ಕೋನಾಕಾರದ ಕ್ಯಾಶ್ಟರ್ ಚಿಟ್ಟೆಯ ಮೀಸೆ, ತಲೆ, ಎದೆ ಮತ್ತು ಹೊಟ್ಟೆಯ ಭಾಗಗಳು ಕೆಂಪು ಮಿಶ್ರಿತ ಕಂದು ಬಣ್ಣವನ್ನು ಹೊಂದಿವೆ. ಈ ಚಿಟ್ಟೆಯು
ಕಾಮನ್ ಕ್ಯಾಶ್ಟರ್ ಚಿಟ್ಟೆಯನ್ನು ಹೋಲುತ್ತದೆ.ಈ ಕ್ಯಾಶ್ಟರ್ ಚಿಟ್ಟೆಗಳನ್ನು ನಾವು ಸಾಮಾನ್ಯವಾಗಿ
ಔಡಲ ಗಿಡಗಳಿರುವ ಜಾಗಗಳಲ್ಲಿ ನೋಡಬಹುದು. ಕೋನಾಕಾರದ ಕ್ಯಾಶ್ಟರ್ ಚಿಟ್ಟೆಗಳು ಮತ್ತು ಕಾಮನ್ ಕ್ಯಾಶ್ಟರ್
ಚಿಟ್ಟೆಗಳು ತಮ್ಮ ಆಹಾರಕ್ಕಾಗಿ ಔಡಲ ಗಿಡಗಳನ್ನು ಅವಲಂಬಿಸಿವೆ. ಔಡಲ ಗಿಡಕ್ಕೆ ಆಂಗ್ಲ ಭಾಷೆಯಲ್ಲಿ
ಕ್ಯಾಶ್ಟರ್ ಆಇಲ್ ಪ್ಲಾಂಟ್ ಎಂದು ಕರೆಯುತ್ತಾರೆ. ಹಾಗಾಗಿ ಈ ಚಿಟ್ಟೆಗೆ ಕ್ಯಾಶ್ಟರ್ ಎಂಬ ಹೆಸರು ಬಂದಿದೆ.
ನಗರ ಪ್ರದೇಶಗಳಲ್ಲಿ ಔಡಲ ಗಿಡಗಳು ಬಹಳ ಅಪರೂಪವಾದ್ದರಿಂದ ಇಂಥಹ ಚಿಟ್ಟೆಗಳನ್ನು ನಗರದಲ್ಲಿ ಕಾಣುವುದು
ಕಷ್ಟ. ಈ ಕೋನಾಕಾರದ ಕ್ಯಾಶ್ಟರ್ ಚಿಟ್ಟೆಗಳನ್ನು ನಾವು ಕುರುಚಲು ಗಿಡ ಮತ್ತು ಪೊದೆಗಳಲ್ಲೂ ಕಾಣಬಹುದು.ಸಾಮಾನ್ಯವಾಗಿ
ಹೆಣ್ಣು ಕೋನಾಕಾರದ ಕ್ಯಾಶ್ಟರ್ ಚಿಟ್ಟೆಗಳ ಬಣ್ಣ ಗಂಡು ಕೋನಾಕಾರದ ಕ್ಯಾಶ್ಟರ್ ಚಿಟ್ಟೆಗಳ ಬಣ್ಣಕ್ಕಿಂತ
ತಿಳಿಯಾಗಿರುತ್ತದೆ. ಕೋನಾಕಾರದ ಕ್ಯಾಶ್ಟರ್ ಚಿಟ್ಟೆಗಳು ಹೂಗಳ ಮೇಲೆ ಕುಳಿತುಕೊಂಡಾಗ ತಮ್ಮ ರೆಕ್ಕೆಗಳನ್ನು
ನಿಧಾನವಾಗಿ ಬಡಿಯುತ್ತಾ ಹೂವಿನ ಮಕರಂದವನ್ನು ಸವಿಯುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಹತ್ತಿರದಲ್ಲಿ.
ವಿಶೇಷ
ಮಾಹಿತಿ: ನಿಂಫಲಿಡ್ಸ್ ಜಾತಿಯ ಚಿಟ್ಟೆಗಳ ಮುಂಭಾಗದ ಕಾಲುಗಳು ಅಪೂರ್ಣವಾಗಿ ಬೆಳೆದಿದ್ದು ದಟ್ಟವಾದ
ಕುಚ್ಚುಗಳನ್ನು ಹೊಂದಿರುತ್ತವೆ. ಆದ್ದರಿಂದ ಈ ಜಾತಿಯ ಚಿಟ್ಟೆಗಳು ತಮ್ಮ ಮುಂಭಾಗದ ಕಾಲುಗಳನ್ನು ನಡೆಯುವುದಕ್ಕಾಗಲಿ, ಹೂ ಗಳ ಮೇಲೆ ಕುಳಿತುಕೊಳ್ಳುವುದಕ್ಕಾಗಲಿ ಉಪಯೋಗಿಸುವುದಿಲ್ಲ.
ಇವುಗಳು ಸಾಧಾರಣ ಗಾತ್ರದ ಪೈರಿಡ್ ಜಾತಿಗೆ ಸೇರಿದ ಚಿಟ್ಟೆಗಳು. ಈ ಚಿಟ್ಟೆಗಳ ರೆಕ್ಕೆಯ ಬಣ್ಣ ನೀಲಿಯಾಗಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಈ ಜಾತಿಯ ಹೆಣ್ಣು ಚಿಟ್ಟೆಗಳಲ್ಲಿ ನೀಲಿ ಬಣ್ಣವು ಬಹಳ ತಿಳಿಯಾಗಿರುತ್ತದೆ ಆದರೆ ಗಂಡು ಚಿಟ್ಟೆಗಳ ರೆಕ್ಕಯು ಕಡು ನೀಲಿ ಬಣ್ಣವನ್ನು ಹೊಂದಿರುತ್ತದೆ. ಇವುಗಳ ಮೀಸೆ, ಎದೆ, ತಲೆ ಮತ್ತು ಹೊಟ್ಟೆಯ ಭಾಗಗಳ ಮೇಲೆ ನೀಲಿ ಬಣ್ಣದ ಕೂದಲಿರುತ್ತವೆ. ದಕ್ಷಿಣ ಏಶಿಯಾದ ಎಲ್ಲಾ ದೇಶಗಳಲ್ಲೂ ಈ ಚಿಟ್ಟೆಗಳು ಕಂಡುಬರುತ್ತವೆ. ಇವುಗಳ ರೆಕ್ಕೆಯ ಅಗಲ ಸರಿ ಸುಮಾರು ೬೫ - ೮೦ ಮಿ.ಮಿ. ನಷ್ಟು. ಇವು ಬಹಳ ವೇಗವಾಗಿ ಹಾರಬಲ್ಲವು. ಈ ಚಿಟ್ಟೆಗಳು ಬ್ಲೂ ಟೈಗರ್ ಚಿಟ್ಟೆಗಳಂತೆಯೆ ಕಾಣುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಕೈದೋಟದಲ್ಲಿ.
ವಿಶೇಷ ಮಾಹಿತಿ : ಕೆಲ ಜಾತಿಯ ಚಿಟ್ಟೆಗಳು ಸುಮಾರು ೨೦೦೦ ಮೈಲಿಗಳಷ್ಟು
ದೂರಕ್ಕೆ ವಲಸೆ ಹೋಗಿ ಮತ್ತೆ ತಮ್ಮ ಮೊದಲಿನ ಸ್ಥಳಕ್ಕೆ ಮರಳಿ ಬರುತ್ತವೆ.
ಇವುಗಳು ಬ್ಲೂ ಜಾತಿಗೆ ಸೇರಿದ ಚಿಟ್ಟೆ. ಇವುಗಳು ಸಾಮಾನ್ಯವಗಿ ಹುಲ್ಲುಗಾವಲಿನಲ್ಲಿ ಮತ್ತು ಪುಟ್ಟು ಪೊದೆಗಳಲ್ಲಿ ಕಂಡುಬರುತ್ತವೆ. ಇವುಗಳು ಬಹಳ ಪುಟ್ಟ ಗಾತ್ರದ ಚಿಟ್ಟೆಗಳಾಗಿದ್ದು ಇವುಗಳನ್ನು ನೋಡಲು ಬಹಳ ಚುರುಕಾದ ದೃಷ್ಟಿ ಇರಬೇಕು. ಇವುಗಳ ರೆಕ್ಕೆಯ ಅಗಲ ಸುಮಾರು ೨೬ - ೩೦ ಮಿ. ಮಿ. ನಷ್ಟು. ಇವುಗಳು ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಕಂಡುಬರುತ್ತದೆ. ಇವುಗಳ ರೆಕ್ಕೆಯ ಮೇಲ್ಭಾಗದ ಬಣ್ಣ ನೇರಳೆಯಾಗಿದ್ದು ಅಂಚಿನಲ್ಲಿ ಕಪ್ಪು ಬಣ್ಣವಿರುತ್ತದೆ. ಈ ಕಪ್ಪು ಬಣ್ಣದ ಸುತ್ತಲೂ ಬಿಳಿ ಬಣ್ಣದ ಪಟ್ಟೆಯನ್ನು ನೋಡಬಹುದು. ಇವುಗಳ ಕೆಳಭಾಗದ ರೆಕ್ಕೆಯ ಬಣ್ಣ ಬೂದು ಬಣ್ಣವಾಗುದ್ದು ಅಲ್ಲಲ್ಲಿ ಕಪ್ಪು ಬಣ್ಣದ ಚುಕ್ಕೆಗಳ್ಕಿರುತ್ತವೆ. ಇವುಗಳ ಎದೆ, ಹೊಟ್ಟೆ ಮತ್ತು ತಲೆಯ ಭಾಗಗಳು ಬೂದು ಬಣ್ಣವನ್ನು ಹೊಂದಿವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಮುಂದಿನ ಕೈದೋಟದಲ್ಲಿ.
ಬ್ಲೂ ಟೈಗರ್ (Blue tiger)
ವೈಜ್ಞಾನಿಕ ಹೆಸರು - ತಿರುಮಲ ಲಿಮ್ನಿಯಾಸೆ
ಇವು ನಿಂಫಲಿಡ್ಸ್ ಜಾತಿಗೆ ಸೇರಿದ ಚಿಟ್ಟೆ. ಇವುಗಳ
ರೆಕ್ಕೆಯ ಬಣ್ಣ ನೀಲಿಯಾಗಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಈ ಕಾರಣದಿಂದಲೆ ಇವುಗಳಿಗೆ
ಈ ಹೆಸರು ಬಂದಿರಬಹುದು. ಇವುಗಳ ಮೀಸೆ, ಹೊಟ್ಟೆ ಮತ್ತು ತಲೆಯ ಭಾಗಗಳು ಕಪ್ಪು
ಬಣ್ಣವನ್ನು ಹೊಂದಿವೆ. ಇವುಗಳ ರೆಕ್ಕೆಯ ಉದ್ದಳತೆ ಸರಿ ಸುಮಾರು ೭೫ - ೧೦೫ ಮಿ.ಮಿ ನಷ್ಟು. ಇವುಗಳ
ಮರಿಹುಳುಗಳ ದೇಹದ ಬಣ್ಣ ಹಳದಿ ಮಿಶ್ರಿತ ಬಿಳಿ. ಮರಿಹುಳುಗಳ ದೇಹದ ಉದ್ದಳತೆ ಸುಮಾರು ೧.೧೦ - ೧.೩೦
ಸೆ.ಮಿ. ನಷ್ಟು. ಭಾರತ, ಶ್ರೀಲಂಕಾ, ಮಯನ್ಮಾರ್,
ಬಾಂಗ್ಲಾದೇಶ ಮತ್ತು ಥೈಲ್ಯಾಂಡ್ ದೇಶದಲ್ಲಿ ಇವುಗಳು ಕಂಡುಬರುತ್ತವೆ. ಮಲೆನಾಡಿನ
ಹಳ್ಳಿಗಳಲ್ಲಿ ಮತ್ತು ಕಾಡಿನಲ್ಲಿ ಕಂಡುಬರುವ ಇವು ನಗರ ಪ್ರದೇಶದಲ್ಲಿ ಕಂಡುಬರುವುದಿಲ್ಲ. ಈ ಚಿತ್ರವನ್ನು
ಕ್ಲಿಕ್ಕಿಸಿದ್ದು ರಾಮನಗರದ ರಾಮ ದೇವರ ಬೆಟ್ಟದಲ್ಲಿ.
ವಿಶೇಷ
ಮಾಹಿತಿ : ಚಿಟ್ಟೆಗಳು ಬರಿ ಹೂವಿನ ಮಕರಂದ ತಿಂದು ಬದುಕಲಾರವು ಅವುಗಳಿಗೂ ಉಪ್ಪಿನ ಅವಶ್ಯಕತೆಯು ಇರುತ್ತದೆ.
ಹಾಗಾಗಿ ಅವುಗಳು ವದ್ದೆ ಮಣ್ಣಿನ ಮೇಲೆ ಕೂತು ಮಣ್ಣಿನಿಂದ ಉಪ್ಪನ್ನು ಹೀರುತ್ತವೆ.
ಗ್ರ್ಯಾಮ್ ಬ್ಲೂ (Gram blue)
ವೈಜ್ಞಾನಿಕ ಹೆಸರು - ಎಚುರೈಸ್ಪ್ಸ್ ನೆಜಸ್
ಇವುಗಳು ಬಹಳ ಪುಟ್ಟ ಗಾತ್ರದ ಚಿಟ್ಟೆಗಳಾಗಿದ್ದು
ಇವುಗಳು ಬ್ಲೂ ಸ್ ಜಾತಿಗೆ ಸೇರಿವೆ. ಇವುಗಳ
ರೆಕ್ಕೆಯ ಅಗಲ ಸರಿ ಸುಮಾರು ೨೫ - ೩೩ ಮಿ.ಮಿ. ನಷ್ಟು. ಇವುಗಳು ಬಹಳ ವೇಗವಾಗಿ ಹಾರುವ ಚಿಟ್ಟೆಗಳಾಗಿದ್ದು
ಹೂವಿನ ಮೇಲೆ ಕೂತಾಗ ರೆಕ್ಕೆಗಳನ್ನು ಅಗಲಿಸುತ್ತವೆ. ಈ ಚಿಟ್ಟೆಗಳ ರೆಕ್ಕೆಯ ಮೇಲ್ಭಾಗವು ತಿಳಿ ನೇರಳೆ
ಬಣ್ಣವನ್ನು ಹೊಂದಿದೆ. ಮೇಲ್ಭಾಗದ ರೆಕ್ಕೆಯ ಕೆಳ
ತುದಿಯಲ್ಲಿ ಕಪ್ಪು ಬಣ್ಣದ ೨ ಚುಕ್ಕಿಗಳಿರುತ್ತವೆ. ಇವುಗಳ ರೆಕ್ಕೆಯ ಕೆಳಭಾಗವು ಬೂದು ಬಣ್ಣವನ್ನು
ಹೊಂದಿದ್ದು ಅಲ್ಲಲ್ಲಿ ಕಡು ಬೂದು ಮತ್ತು ಕಪ್ಪು ಬಣ್ಣದ ಚುಕ್ಕೆಗಳಿರುತ್ತವೆ. ಇವುಗಳ ಮೀಸೆಯು ಕಪ್ಪು ಬಿಳಿ ಬಣ್ಣವನ್ನು ಹೊಂದಿದೆ. ಇವುಗಳ
ತೆಲೆ, ಎದೆ ಮತ್ತು ಹೊಟ್ಟೆಯ ಭಾಗಗಳ ಮೇಲೆ ಕಡು ಕಂದು ಬಣ್ಣವಿದ್ದು ಕೆಳಭಾಗವು
ಬಿಳಿ ಬಣ್ಣವನ್ನು ಹೊಂದಿವೆ. ಈ ಚಿಟ್ಟೆಗಳನ್ನು ನಗರ ಪ್ರದೇಶದಲ್ಲಿ ನೋಡುವುದು ಅಪರೂಪವೆ ಸರಿ. ಈ ಚಿತ್ರವನ್ನು
ಕ್ಲಿಕ್ಕಿಸಿದ್ದು ದಾಂಡೇಲಿ ಕಾಡಿನಲ್ಲಿ.
ವಿಶೇಷ
ಮಾಹಿತಿ : ಜಗತ್ತಿನಲ್ಲಿ ೧/೮ ಇಂಚುಗಳಿಂದ ೧೨ ಇಂಚುಗಳವರೆಗಿನ ಗಾತ್ರ ಹೊಂದಿರುವ ಚಿಟ್ಟೆಗಳಿವೆ.
ಕಾಮನ್ ವಾಂಡರರ್ (common wanderer)
ವೈಜ್ಞಾನಿಕ ಹೆಸರು - ಪರೆರೊನಿಯ ವಲೆರಿಯ
ಇವುಗಳು ಸಾಧಾರಣ ಗಾತ್ರದ ಪೈರಿಡ್ ಜಾತಿಗೆ ಸೇರಿದ ಚಿಟ್ಟೆಗಳು. ಈ ಚಿಟ್ಟೆಗಳ ರೆಕ್ಕೆಯ ಬಣ್ಣ ನೀಲಿಯಾಗಿದ್ದು ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಈ ಜಾತಿಯ ಹೆಣ್ಣು ಚಿಟ್ಟೆಗಳಲ್ಲಿ ನೀಲಿ ಬಣ್ಣವು ಬಹಳ ತಿಳಿಯಾಗಿರುತ್ತದೆ ಆದರೆ ಗಂಡು ಚಿಟ್ಟೆಗಳ ರೆಕ್ಕಯು ಕಡು ನೀಲಿ ಬಣ್ಣವನ್ನು ಹೊಂದಿರುತ್ತದೆ. ಇವುಗಳ ಮೀಸೆ, ಎದೆ, ತಲೆ ಮತ್ತು ಹೊಟ್ಟೆಯ ಭಾಗಗಳ ಮೇಲೆ ನೀಲಿ ಬಣ್ಣದ ಕೂದಲಿರುತ್ತವೆ. ದಕ್ಷಿಣ ಏಶಿಯಾದ ಎಲ್ಲಾ ದೇಶಗಳಲ್ಲೂ ಈ ಚಿಟ್ಟೆಗಳು ಕಂಡುಬರುತ್ತವೆ. ಇವುಗಳ ರೆಕ್ಕೆಯ ಅಗಲ ಸರಿ ಸುಮಾರು ೬೫ - ೮೦ ಮಿ.ಮಿ. ನಷ್ಟು. ಇವು ಬಹಳ ವೇಗವಾಗಿ ಹಾರಬಲ್ಲವು. ಈ ಚಿಟ್ಟೆಗಳು ಬ್ಲೂ ಟೈಗರ್ ಚಿಟ್ಟೆಗಳಂತೆಯೆ ಕಾಣುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಕೈದೋಟದಲ್ಲಿ.
ಲೆಸ್ಸರ್ ಗ್ರಾಸ್ ಬ್ಲೂ (Lesser grass blue)
ವೈಜ್ಞಾನಿಕ ಹೆಸರು - ಜಿಜಿನಾ ಒಟಿಸ್
ಇವುಗಳು ಬ್ಲೂ ಜಾತಿಗೆ ಸೇರಿದ ಚಿಟ್ಟೆ. ಇವುಗಳು ಸಾಮಾನ್ಯವಗಿ ಹುಲ್ಲುಗಾವಲಿನಲ್ಲಿ ಮತ್ತು ಪುಟ್ಟು ಪೊದೆಗಳಲ್ಲಿ ಕಂಡುಬರುತ್ತವೆ. ಇವುಗಳು ಬಹಳ ಪುಟ್ಟ ಗಾತ್ರದ ಚಿಟ್ಟೆಗಳಾಗಿದ್ದು ಇವುಗಳನ್ನು ನೋಡಲು ಬಹಳ ಚುರುಕಾದ ದೃಷ್ಟಿ ಇರಬೇಕು. ಇವುಗಳ ರೆಕ್ಕೆಯ ಅಗಲ ಸುಮಾರು ೨೬ - ೩೦ ಮಿ. ಮಿ. ನಷ್ಟು. ಇವುಗಳು ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಕಂಡುಬರುತ್ತದೆ. ಇವುಗಳ ರೆಕ್ಕೆಯ ಮೇಲ್ಭಾಗದ ಬಣ್ಣ ನೇರಳೆಯಾಗಿದ್ದು ಅಂಚಿನಲ್ಲಿ ಕಪ್ಪು ಬಣ್ಣವಿರುತ್ತದೆ. ಈ ಕಪ್ಪು ಬಣ್ಣದ ಸುತ್ತಲೂ ಬಿಳಿ ಬಣ್ಣದ ಪಟ್ಟೆಯನ್ನು ನೋಡಬಹುದು. ಇವುಗಳ ಕೆಳಭಾಗದ ರೆಕ್ಕೆಯ ಬಣ್ಣ ಬೂದು ಬಣ್ಣವಾಗುದ್ದು ಅಲ್ಲಲ್ಲಿ ಕಪ್ಪು ಬಣ್ಣದ ಚುಕ್ಕೆಗಳ್ಕಿರುತ್ತವೆ. ಇವುಗಳ ಎದೆ, ಹೊಟ್ಟೆ ಮತ್ತು ತಲೆಯ ಭಾಗಗಳು ಬೂದು ಬಣ್ಣವನ್ನು ಹೊಂದಿವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಮುಂದಿನ ಕೈದೋಟದಲ್ಲಿ.
ವಿಶೇಷ ಮಾಹಿತಿ: ಚಿಟ್ಟೆಗಳ ಮೊಟ್ಟೆಗಳಿಗೆ ಗಟ್ಟೆಯಾದ ಚಿಪ್ಪಿರುತ್ತದೆ.
ಈ ಚಿಪ್ಪಿನ ಮೇಲೆ ಮೇಣದಂಥಹ ದ್ರವವಿರುತ್ತದೆ. ಈ ದ್ರವವಿರುವುದರಿಂದ ಮೊಟ್ಟೆಗಳು ಒಣಹವೆಯಲ್ಲೂ ಒಣಗಿ
ಸೀಳುವುದಿಲ್ಲಾ.
ಲೆಮನ್ ಪ್ಯಾನ್ಸಿ (Lemon pansy)
ವೈಜ್ಞಾನಿಕ ಹೆಸರು - ಜುನೊನಿಯಾ ಲೆಮೊನಿಯಾಸ್
ಇದು ನಿಂಫಲಿಡ್ಸ್ ಜಾತಿಗೆ ಸೇರಿದ ಚಿಟ್ಟೆ. ಇವುಗಳು ಕೈದೋಟದಲ್ಲಿ , ವ್ಯವಸಾಯ ಪ್ರದೇಶದಲ್ಲಿ ಮತ್ತು ಹುಲ್ಲುಗಾವಲಿನಲ್ಲಿ
ಕಂಡುಬರುತ್ತವೆ. ಇವುಗಳು ಸಾಧಾರಣ ಗಾತ್ರದ ಚಿಟ್ಟೆಗಳಾಗಿದ್ದು ,ಸರ್ವೇಸಾಮಾನ್ಯವಾಗಿ ಕಂಡುಬರುತ್ತವೆ.
ಇವುಗಳ ರೆಕ್ಕೆಯ ಅಗಲ ಸುಮಾರು ೪೫ - ೬೦ ಮಿ.ಮಿ. ನಷ್ಟು. ಇವುಗಳು ಬಹಳ ಚುರುಕಾಗಿ ಹಾರುತ್ತವೆ. ಇವುಗಳು
ಹೂವಿನ ಮೇಲೆ ಮತ್ತು ನೆಲದ ಮೇಲೆ ಕುಳಿತಾಗ ತಮ್ಮ ರೆಕ್ಕೆಗಳನ್ನು ಹರಡುತ್ತವೆ. ಈ ಚಿಟ್ಟೆಗಳ ರೆಕ್ಕೆಯ
ಮೇಲ್ಭಾಗ ಕಂದು ಬಣ್ಣವಾಗಿದ್ದು ೪ ದೊಡ್ಡ ಚುಕ್ಕೆಗಳಿರುತ್ತವೆ. ಮೇಲ್ಭಾಗದ
ರೆಕ್ಕೆಯ ಬಲಭಾಗದ ಮೇಲೆ ಸಣ್ಣ ಸಣ್ಣ ಹಳದಿ ಚುಕ್ಕೆಗಳಿರುತ್ತವೆ. ಇವುಗಳ ರೆಕ್ಕೆಯ ಕೆಳಭಾಗವು
ಹಳದಿ ಬಣ್ಣ ಹೂಂದಿದ್ದು ಅಲ್ಲಲ್ಲಿ ಕಂದು ಬಣ್ಣದ ಪಟ್ಟೆಗಳಿರುತ್ತವೆ.
ವಿಶೇಷ ಮಾಹಿತಿ: ಈ ಚಿಟ್ಟೆಗಳ ರೆಕ್ಕೆಯ ಮೇಲಿರುವ ಚುಕ್ಕೆಗಳು ದೊಡ್ಡ ಕಣ್ಣುಗಳಂತೆ
ಕಾಣುತ್ತವೆ. ಇವುಗಳನ್ನು ಹಿಡಿಯಲು ಬರುವ ಶತ್ರು ಪ್ರಾಣಿಗಳು ಈ ಚುಕ್ಕೆಗಳನ್ನು ನೋಡಿ ಭಯಗೊಂಡು ಇವುಗಳಿಂದ
ದೂರ ಹೋಗುತ್ತವೆ. ( ಆಂಗ್ಲ ಭಾಷೆಯಲ್ಲಿ ಇವುಗಳಿಗೆ false eyes ಎನ್ನುತ್ತಾರೆ).
ಡಾರ್ಕ್ ಸ್ಮಾಲ್ ಬ್ರ್ಯಾಂಡೆಡ್ ಸ್ವಿಫ಼್ಟ್ (Dark small-branded swift)
ವೈಜ್ಞಾನಿಕ ಹೆಸರು - ಪೆಲೊಪಿಡಸ್ ಮಥೈಸ್
ಹೆಸರೇ ಹೇಳುವಂತೆ ಇವುಗಳು ಬಲು ಪುಟ್ಟ ಗಾತ್ರದ, ವೇಗವಾಗಿ ಹಾರಬಲ್ಲ ಚಿಟ್ಟೆಗಳು.
ಇವುಗಳು ಸ್ಕಿಪ್ಪರ್ ಜಾತಿಗೆ ಸೇರುತ್ತವೆ. ಆಫ್ರಿಕಾ ಮತ್ತು ದಕ್ಷಿಣ ಏಷಿಯಾ ಖಂಡದಲ್ಲಿ ಈ ಚಿಟ್ಟೆಗಳು
ಕಂಡುಬರುತ್ತವೆ. ಇವು ಭತ್ತದ ಗಿಡದ ಎಲೆಗಳ ಮೇಲೆ ತಮ್ಮ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳಿಂದ
ಹೊರಬಂದ ಮರಿಹುಳುಗಳು ಈ ಭತ್ತದ ಎಲೆಗಳನ್ನು ತಿನ್ನುತ್ತವೆ. ಈ ಮರಿಹುಳುಗಳು ದಪ್ಪವಾದ ನಂತರ ಇದೆ ಗಿಡದ
ಮೇಲೆ ಗೂಡನ್ನು ಕಟ್ಟಿಕೊಳ್ಳುತ್ತವೆ. ಈ ಗೂಡಿನಿಂದ ಹೊರಬಂದ ಚಿಟ್ಟೆಯು ಈ ಚಿತ್ರದಲ್ಲಿರುವ ರೂಪವನ್ನು
ಪಡೆಯುತ್ತದೆ. ಈ ಚಿಟ್ಟೆಯ ರೆಕ್ಕೆಯು ಹಸಿರು ಮಿಶ್ರಿತ ಬೂದು ಬಣ್ಣವನ್ನು ಹೊಂದಿದ್ದು ಅಲ್ಲಲ್ಲಿ ಬಿಳಿ
ಬಣ್ಣದ ಸಣ್ಣ ಚುಕ್ಕೆಗಳಿರುತ್ತವೆ. ಈ ಜಾತಿಯ ಚಿಟ್ಟೆಗಳ
ಕಣ್ಣುಗಳು ಬಲು ದೊಡ್ಡದಾಗಿರುತ್ತದೆ. ಇವುಗಳು ಬಹಳ ಚುರುಕಾಗಿ ಹಾರುವುದರಿಂದ ಇವುಗಳನ್ನು ಗಮನಿಸುವುದು
ಕಷ್ಟವೇ ಸರಿ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಸವದತ್ತಿ ಹತ್ತಿರದ ನವಿಲುತೀರ್ಥದಲ್ಲಿ.
ವಿಶೇಷ ಮಾಹಿತಿ : ಈ ಜಾತಿಗೆ ಸೇರಿದ ಗೋಲ್ಡನ್ angle ಎಂಬ ಚಿಟ್ಟೆಯು ರಾತ್ರಿ ಹೊತ್ತಿನಲ್ಲೂ ಹಾರುತ್ತದೆ.
ಜೇಂಟ್ ರೆಡ್ ಐ (Giant red eye - ದೊಡ್ಡ ಕೆಂಪು ಕಣ್ಣಿನ ಚಿಟ್ಟೆ)
ವೈಜ್ಞಾನಿಕ ಹೆಸರು - ಗಂಗಾರ ಥೈರ್ಸಿಸ್
ಹೆಸರೆ ಹೇಳುವಂತೆ ಈ ಚಿಟ್ಟೆಗಳು ಬಲು ದೊಡ್ಡದಾದ ಕೆಂಪು
ಕಣ್ಣುಗಳನ್ನು ಹೊಂದಿವೆ. ಈ ಚಿಟ್ಟೆಗಳು ಭಾರತ ಮತ್ತು ಶ್ರೀಲಂಕಾ ದೇಶದಲ್ಲಿ ಕಂಡುಬರುತ್ತವೆ. ಇವುಗಳ
ರೆಕ್ಕೆಯ ಅಗಲ ಸುಮಾರು ೬೪ - ೮೩ ಮಿ.ಮಿ. ನಷ್ಟು. ಇವು ಸ್ಕಿಪ್ಪರ್ ಜಾತಿಗೆ ಸೇರಿದ ಚಿಟ್ಟೆಗಳು. ಇವುಗಳ
ಮೇಲ್ಭಾಗದ ರೆಕ್ಕೆಯು ಕಂದು ಬಣ್ಣ ಹೊಂದಿದ್ದು ಅಲ್ಲಲ್ಲಿ
ಹಳದಿ ಬಣ್ಣದ ಚುಕ್ಕೆಗಳಿರುತ್ತವೆ. ಕೆಳಭಾಗದ ರೆಕ್ಕೆಯು ಕಪ್ಪು ಬಣ್ಣ ಹೊಂದಿದ್ದು ಅಲ್ಲಲ್ಲಿ ಕೊದಲಿನಂತೆ
ಬಿಳಿ ಬಣ್ಣವಿರುವುದನ್ನು ಗಮನಿಸಬಹುದು. ಇವುಗಳ ಎದೆಯ ಭಾಗದಲ್ಲಿ ಕಂದು ಬಣ್ಣದ ಕೂದಲುಗಳಿರುತ್ತವೆ. ಇವುಗಳು ಬಹಳ ವೇಗವಾಗಿ ಅನಶ್ಚಿತ ಪಥದಲ್ಲಿ ಹಾರುತ್ತವೆ. ನಗರ ಪ್ರದೇಶದಲ್ಲಿ ಇವುಗಳನ್ನು ನೋಡುವುದು ಅಪರೂಪವೇ ಸರಿ.
ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಅಂಗಳದಲ್ಲಿ.
ವಿಶೇಷ ಮಾಹಿತಿ : ಸಾಮಾನ್ಯವಾಗಿ ಚಿಟ್ಟೆಗಳ ಆಯಸ್ಸು ೨ - ೪ ವಾರದಷ್ಟು.
ಎಗ್ ಫ಼್ಲೈ (Eggfly)
ವೈಜ್ಞಾನಿಕ ಹೆಸರು - ಹೈಪೊಲಿಮ್ನಸ್ ಬೊಲಿನಾ
ಇವು ನಿಂಫಲಿಡ್ಸ್ ಜಾತಿಗೆ ಸೇರಿದ ಚಿಟ್ಟೆಗಳು. ಇವುಗಳ ರೆಕ್ಕಯ ಅಗಲ ಸುಮಾರು ೭೦ - ೧೧೦ ಮಿ.ಮಿ ನಷ್ಟು. ಇವುಗಳು ತಮ್ಮ ಪ್ರಾಂತ್ಯಕ್ಕಾಗಿ
ಬೇರೆ ಚಿಟ್ಟೆಗಳೊಡನೆ ಜಗಳವಾಡುತ್ತವೆ. ಗಂಡು ಚಿಟ್ಟೆಗಳ ಮೇಲ್ಭಾಗದ ರೆಕ್ಕೆಯು
ಕಪ್ಪು ಬಣ್ಣದಿಂದ ಕೂಡಿದ್ದು ೪ ದೊಡ್ಡ ಗಾತ್ರದ ಬಿಳಿ ಬಣ್ಣದ ಚುಕ್ಕೆಗಳನ್ನು ಹೊಂದಿದೆ. ಈ ಬಿಳಿ ಚುಕ್ಕೆಗಳ ಅಂಚಿನಲ್ಲಿರುವ ನೀಲಿ ಬಣ್ಣವು ಈ ಚಿಟ್ಟೆಯನ್ನು ಇನ್ನು ಆಕರ್ಷಕವಾಗಿ
ಕಾಣುವಂತೆ ಮಾಡುತ್ತದೆ. ಹೆಣ್ಣು ಚಿಟ್ಟೆಗಳ ಮೇಲ್ಭಾಗದ ರೆಕ್ಕೆಯು ಕಪ್ಪಾಗಿದ್ದು ಅಂಚಿನಲ್ಲಿ ಚಿಕ್ಕ ಚಿಕ್ಕೆ ಗಾತ್ರದ
ಅನೇಕ ಚುಕ್ಕೆಗಳಿರುತ್ತವೆ. ಗಂಡು ಚಿಟ್ಟೆಗಳ ಕೆಳಭಾಗದ ರೆಕ್ಕೆಯು ಕಪ್ಪಾಗಿದ್ದರೆ
ಹೆಣ್ಣು ಚಿಟ್ಟೆಗಳಲ್ಲಿ ಕಂದು ಬಣ್ಣದಿಂದ ಕೂಡಿರುತ್ತದೆ. ಕೆಳಭಾಗದ ರೆಕ್ಕೆಯಲ್ಲಿ
ಅಲ್ಲಲ್ಲಿ ಬಿಳಿ ಪಟ್ಟೆಗಳನ್ನು ನೋಡಬಹುದು.
ವಿಶೇಷ ಮಾಹಿತಿ: ಈ ಜಾತಿಯ ಹೆಣ್ಣು ಚಿಟ್ಟೆಗಳು ಗಿಡದ ಎಲೆಗಳ ಕೆಳಗೆ ಮೊಟ್ಟೆಯಿಡುವ ಮುನ್ನ ಇರುವೆ ಹುಳುಗಳ
ಇರುವಿಕೆಯನ್ನು ಪರೀಕ್ಷಿಸಿ, ಅವುಗಳು ಇಲ್ಲದಿರುವಂಥಹ ಗಿಡದಲ್ಲಿ ಮೊಟ್ಟೆಗಳನ್ನಿಡುತ್ತವೆ.
ಬುಷ್ ಬ್ರೌನ್ (Bushbrown)
ವೈಜ್ಞಾನಿಕ ಹೆಸರು - ಮೈಕಲೆಸಿಸ್ ಪೆರ್ಸಿಸ್
ಇವು ಬ್ರೌನ್ಸ್ ಜಾತಿಗೆ ಸೇರಿದ ಚಿಟ್ಟೆಗಳು. ಇವು ಸಾಧಾರಣ ಗಾತ್ರದ ಚಿಟ್ಟೆಗಳಾಗಿದ್ದು
ರೆಕ್ಕೆಯ ಅಗಲ ಸಮಾರು ೩೮ - ೫೫ ಮಿ.ಮಿ ನಷ್ಟಿರುತ್ತದೆ. ಇವುಗಳು ಸಾಮಾನ್ಯವಾಗಿ ವದ್ದೆ ನೆಲದಲ್ಲಿ,
ನೆರಳಿನಲ್ಲಿ ಹಾಗು ಕಟ್ಟಿಗೆಗಳಿರುವ ಜಾಗದಲ್ಲಿ ಕಂಡುಬರುತ್ತವೆ. ಇವುಗಳು ಸಾಮಾನ್ಯವಾಗಿ ಮಲೆನಾಡಿನ
ಕಾಡಿನಲ್ಲಿ ಕಾಣಸಿಗುತ್ತವೆ. ಇವುಗಳನ್ನು ನಗರ ಪ್ರದೇಶದಲ್ಲಿ ಕಾಣುವುದು ಅಪರೂಪವೇ ಸರಿ. ಇದರ ಮೀಸೆ,
ತಲೆ, ಎದೆ ಮತ್ತು ಹೊಟ್ಟೆಯ ಭಾಗಗಳು ಕಡು ಕಂದು ಬಣ್ಣವನ್ನು ಹೊಂದಿವೆ. ಇವುಗಳ ರೆಕ್ಕೆಯು ಕೂಡ ಕಡು ಕಂದು ಬಣ್ಣವನ್ನು ಹೊಂದಿದ್ದು ಹಿಂಭಾಗದಲ್ಲಿ ಒಂದು
ಬಿಳಿ ಪಟ್ಟೆಯಿದ್ದು, ಹಿಂದೆ ಕಣ್ಣಿನಂತೆ ಕಾಣುವ ಅನೇಕ ಚುಕ್ಕೆಗಳಿರುತ್ತವೆ.
ವಿಶೇಷ ಮಾಹಿತಿ : ಬಹುತೇಕ ಚಿಟ್ಟೆಗಳ ರೆಕ್ಕಯ ಬಣ್ಣವು ವಾತಾವರಣಕ್ಕೆ ತಕ್ಕಂತೆ
ಬದಲಾಗುತ್ತದೆ.ಈ ಚಿಟ್ಟೆಗಳ ರೆಕ್ಕೆಯ ಬಣ್ಣವು ಒಣ ಹವೆಯಲ್ಲಿ(Dry-season) ಕೆಳಗಿನ ಚಿತ್ರದಲ್ಲಿರುವಂತೆ ಬದಲಾಗುತ್ತದೆ.
ಕ್ರಿಂಸನ್ ರೊಸ್ (Crimson rose)
ವೈಜ್ಞಾನಿಕ ಹೆಸರು - ಪಚ್ ಲಿಯೊಪ್ಟಾ ಹೆಕ್ಟರ್
ಇವು ದೊಡ್ಡ ಗಾತ್ರದ ಚಿಟ್ಟೆಗಳಾಗಿದ್ದು ರೆಕ್ಕೆಯ ಅಗಲ ಸರಿ ಸುಮಾರು ೯೦
- ೧೧೦ ಮಿ.ಮಿ. ನಷ್ಟು. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ
ಕಂಡುಬರುವ ಇವು ಶ್ರೀಲಂಕಾ ಮತ್ತು ಮಯನ್ಮಾರ್ ದೇಶದಲ್ಲೂ ಕಂಡುಬರುತ್ತವೆ. ಕಾಡಿಗಳಲ್ಲಿ ಅತಿ ಹೆಚ್ಚಾಗಿ
ಕಂಡುಬರುವ ಈ ಜಾತಿಯ ಚಿಟ್ಟೆಗಳು ನಗರ ಪ್ರದೇಶದಲ್ಲೂ ಕಾಣಸಿಗುತ್ತವೆ. ರೆಕ್ಕೆಯ ಮೇಲ್ಭಾಗವು ಕಪ್ಪು
ಬಣ್ಣ ಹೊಂದಿದ್ದು ಮೇಲಿನ ಭಾಗದ ರೆಕ್ಕೆಯಲ್ಲಿ ೨ ದೊಡ್ಡ ಗಾತ್ರದ ಬಿಳಿ ಪಟ್ಟೆಗಳಿದ್ದರೆ ಕೆಳಭಾದಲ್ಲಿ
ಕೆಂಪು ಚುಕ್ಕೆಗಳಿರುತ್ತವೆ. ಇವುಗಳ ತೆಲೆ, ಎದೆ ಮತ್ತು ಹೊಟ್ಟೆಯ ಭಾಗಗಳು ಮೇಲ್ಭಾಗದಲ್ಲಿ ಕೆಂಪು
ಬಣ್ಣವನ್ನು ಹೊಂದಿವೆ. ಈ ಚಿಟ್ಟೆಗಳು ಹೂವುಗಳ ಮೇಲೆ ಕುಳಿತಾಗಲೂ ರೆಕ್ಕೆಯನ್ನು ಬಡಿಯುತ್ತಿರುತ್ತವೆ.
ಈ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದದ್ದು ನಮ್ಮ ಮನೆಯ ಹತ್ತಿರದಲ್ಲಿ.
ವಿಶೇಷ ಮಾಹಿತಿ : ಈ ಜಾತಿಯ ಕೀಡಿ ಹುಳುಗಳು ನಿಂಬೆ ಮತ್ತು ಸೀತಾಫಲ ಮರದಲ್ಲಿ
ಹೆಚ್ಚಾಗಿ ಕಂಡುಬರುತ್ತವೆ.
ಪೀ ಬ್ಲೂ (Pea blue)
ವೈಜ್ಞಾನಿಕ ಹೆಸರು - ಲಾಂಪಿಡ್ಸ್ ಬೌತಿಕಸ್
ಇವುಗಳ ರೆಕ್ಕೆಯ ಅಗಲ ಸರಿ ಸುಮಾರು ೨೪ - ೩೬ ಮಿ.ಮಿ ನಷ್ಟು. ಆಷ್ಟೇಲಿಯಾ,
ಆಫ್ರಿಕಾ, ಏಷಿಯಾ, ಯೂರೊಪ್ ಖಂಡಗಳಲ್ಲಿ ಇವು ಕಂಡುಬರುತ್ತವೆ. ಇವುಗಳ ರೆಕ್ಕೆಯ ಕೆಳಭಾಗವು ಬೂದು ಮತ್ತು
ಬಿಳಿ ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ.
ರೆಕ್ಕೆಯ ಹಿಂಭಾಗದ ಕೆಳಗಿನ ತುದಿಯಲ್ಲಿ ೨ ಚಿಕ್ಕ ಗಾತ್ರದ ಕಪ್ಪು ಚುಕ್ಕೆಗಳಿರುವುದನ್ನು
ಗಮನಿಸಬಹುದು. ಈ ಚುಕ್ಕೆಗಳ ಹಿಂದೆ ಸಣ್ಣದಾದ ೨ ಬಾಲಗಳನ್ನು
ನೋಡಬಹುದು.ಇವುಗಳ ರೆಕ್ಕೆಯ ಮೇಲ್ಭಾಗದಲ್ಲಿ ನೇರಳೆ ಬಣ್ಣವಿದ್ದು ಅಂಚಿನಲ್ಲಿ
ಕಂದು ಬಣ್ಣವನ್ನು ಕಾಣಬಹುದು. ಇವುಗಳು ಬಹಳ ವೇಗವಾಗಿ ಹಾರುವುದರಿಂದ ಇವುಗಳನ್ನು ಸೂಕ್ಷ್ಮವಾಗಿ ಗಮನಿಸುವುದು
ಬಹಳ ಕಷ್ಟ. ಈ ಚಿಟ್ಟೆಗಳು ಹಳ್ಳಿಗಳಲ್ಲಿ ಮತ್ತು ಬಯಲಿನಲ್ಲಿ ಕಂಡುಬರುತ್ತವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಕನಕಪುರದ ಹತ್ತಿರವಿರುವ
ಒಂದು ಹಳ್ಳಿಯಲ್ಲಿ.
ವಿಶೇಷ ಮಾಹಿತಿ : ಗಂಡು ಚಿಟ್ಟೆಗಳಲ್ಲಿ ಸುವಾಸನೆ ಬೀರುವ ಗ್ರಂಥಿಗಳಿರುತ್ತದೆ.
ಹೆಣ್ಣು ಚಿಟ್ಟೆಗಳನ್ನು ಆಕರ್ಷಿಸಲು ಗಂಡು ಚಿಟ್ಟೆಗಳು ಈ ಗ್ರಂಥಿಗಳಿಂದ ಸುವಾಸನೆ ಬೀರುತ್ತವೆ.
ಶ್ಟ್ರೈಪ್ಡ್ ಟೈಗರ್ (Striped tiger)
ವೈಜ್ಞಾನಿಕ ಹೆಸರು - ಡಾನಸ್ ಜೆನುಸಿಯಾ
ಈ ಚಿಟ್ಟೆಗಳು ಭಾರತದಲ್ಲಿ ಹೇರಳವಾಗಿ ಕಂಡುಬರುತ್ತವೆ. ಇವುಗಳ ರೆಕ್ಕೆಯ
ಅಗಲ ಸುಮಾರು ೭ - ೯೫ ಮಿ.ಮಿ ನಷ್ಟು. ಈ ಚಿಟ್ಟೆಗಳ ರೆಕ್ಕೆಯ ಬಣ್ಣವು ಹುಲಿಯ ಮೈ ಬಣ್ಣದಂತೆ ಕೇಸರಿಯಾಗಿದ್ದು
ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟೆಗಳಿರುತ್ತವೆ. ಆದ್ದರಿಂದಲೆ ಇವುಗಳಿಗೆ ಶ್ಟ್ರೈಪ್ಡ್ ಟೈಗರ್ ಎಂಬ ಹೆಸರು
ಬಂದಿರಬಹುದು. ಇದೆ ಚಿಟ್ಟೆಯಂತೆ ಕಾಣುವ ಪಟ್ಟೆಯಿಲ್ಲದಿರುವ ಮತ್ತೊಂದು ಚಿಟ್ಟೆಯ ಜಾತಿಯೂ ಉಂಟು. ಆ
ಚಿಟ್ಟೆಯ ಹೆಸರು ಪ್ಲೇನ್ ಟೈಗರ್. ಹಕ್ಕಿಗಳಿಗೆ ಹಾಗು ಇನ್ನಿತರೆ ಶತ್ರು ಪ್ರಾಣಿಗಳಿಗೆ ಈ ಚಿಟ್ಟೆಗಳ
ವಾಸನೆ ಹಿಡಿಸುವುದಿಲ್ಲಾ, ಆದ್ದರಿಂದ ಅವುಗಳು ಈ ಚಿಟ್ಟೆಗಳನ್ನು ಹಿಡಿದ ತಕ್ಷಣವೇ ಬಿಟ್ಟುಬಿಡುತ್ತವೆ.
ಈ ಚಿಟ್ಟೆಯ ಚಿತ್ರವನ್ನು ಕ್ಲಿಕ್ಕಿಸಿದ್ದು ಪಿಳಿಕುಳ ಜ಼ೂ ನ ಬಳಿಯಲ್ಲಿ. ಇವುಗಳ ಎದೆ ಮತ್ತು ತಲೆಯ
ಭಾಗದಲ್ಲಿ ಕಪ್ಪು ಬಣ್ಣವಿದ್ದು ಅಲ್ಲಲ್ಲಿ ಬಿಳಿ ಬಣ್ಣದ ಚುಕ್ಕೆಗಳಿರುತ್ತವೆ. ಇವುಗಳ ಹೊಟ್ಟೆಯಭಾಗವು
ಕೇಸರಿ ಬಣ್ಣವನ್ನು ಹೊಂದಿರುತ್ತದೆ.
ವಿಶೇಷ ಮಾಹಿತಿ : ಕೆಲ ಜಾತಿಯ ಚಿಟ್ಟೆಗಳು ತಮ್ಮ ಕಾಲಿನಲ್ಲಿರುವ ಮುಳ್ಳಿನಂಥಹ
ಕೂದಲಿನಿಂದ ತಮ್ಮ ಮೀಸೆಯನ್ನು ಉಜ್ಜಿ ಸ್ವಚ್ಛ ಮಾಡಿಕೊಳ್ಳುತ್ತವೆ.
ಫಾರ್ಗೆಟ್ ಮಿ ನಾಟ್ (Forget me not)
ವೈಜ್ಞಾನಿಕ ಹೆಸರು - ಕಾಟೊಕ್ರೈಸೊಪ್ಸ್ ಸ್ಟ್ರಾಬೊ
ಇವುಗಳು ಬಹಳ ಚಿಕ್ಕ ಗಾತ್ರದ ಚಿಟ್ಟೆಗಳು. ಇವುಗಳು ಭಾರತ, ಶ್ರೀಲಂಕಾ, ಪಿಲಿಪೈನ್ಸ್ ನಲ್ಲಿ ನೋಡಲು
ಸಿಗುತ್ತವೆ. ಇವುಗಳ ರೆಕ್ಕೆಯ ಅಳತೆ ಸುಮಾರು ೨೫ - ೩೦ ಮಿ.ಮಿ. ನಷ್ಟು. ಇವುಗಳ ರೆಕ್ಕೆಯ ಮೇಲಿನ ಭಾಗವು
ತಿಳಿ ನೀಲಿ ಬಣ್ಣದಿಂದ ಕೂಡಿದ್ದು ರೆಕ್ಕೆಯ ಕೆಳಭಾಗವು ತಿಳಿ ಬೂದು ಬಣ್ಣದಿಂದ ಕೂಡಿದೆ. ಇದರ ಮೀಸೆ,
ಎದೆ ಮತ್ತು ಹೊಟ್ಟೆಯ ಭಾಗಗಳು ತಿಳಿ ನೀಲಿ ಬಣ್ಣವನ್ನು ಹೊಂದಿವೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ನಮ್ಮ ಮನೆಯ ಹತ್ತಿರದಲ್ಲಿ. ಈ ಚಿಟ್ಟೆಗಳನ್ನು ನಗರ ಪ್ರದೇಶದಲ್ಲಿ
ನೋಡವುದು ಅಪರೂಪವೆ ಸರಿ.
ವಿಶೇಷ ಮಾಹಿತಿ : ಚಿಟ್ಟೆಗಳು ಹೂವಿನ ರುಚಿಯನ್ನು ಸವೆಯುವುದು ತಮ್ಮ ಕಾಲಿನಿಂದ.
ರೆಡ್ ಟಿಪ್ (Red tip)
ವೈಜ್ಞಾನಿಕ ಹೆಸರು - ಕೊಲೊಟಿಸ್ ಡಾನೆ
ಇವುಗಳ ರೆಕ್ಕೆಯ ಅಗಲ ೮೦ - ೧೦೦ ಮಿ.ಮಿ. ನಷ್ಟು. ಈ ಚಿಟ್ಟೆಗಳು ಬಹಳ ವೇಹವಾಗಿ ಹಾರುತ್ತವೆ.
ಕಾಡಿನಂಚಿನಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಈ ಚಿಟ್ಟೆಗಳು ಕಂಡುಬರುತ್ತವೆ. ಈ ಚಿಟ್ಟೆಗಳ ರೆಕ್ಕೆಯ
ಮೇಲ್ಭಾದ ಬಣ್ಣ ಬಿಳಿಯಾಗಿದ್ದು ಮೇಲ್ಭಾದ ಅಂಚಿನಲ್ಲಿ ಕೆಂಪು ಬಣ್ಣವಿರುತ್ತದೆ. ಆದ್ದರಿಂದಲೆ ಇವುಗಳಿಗೆ
ಈ ಹೆಸರು ಬಂದಿರಬಹುದು. ಇವುಗಳ ರೆಕ್ಕೆಯ ಕೆಳಭಾಗದಲ್ಲಿ ಬಿಳಿ ಬಣ್ಣವಿದ್ದು ಅಲ್ಲಲಿ ಸಣ್ಣ ಗಾತ್ರದ
ಕೆಂಪು ಅಥವಾ ಕಪ್ಪು ಚುಕ್ಕೆಗಳಿರುತ್ತವೆ. ಈ ಚಿಟ್ಟೆಗಳು ಹಾರುವ ಪಥ ಅನಿಶ್ಚಿತ, ಆದ್ದರಿಂದ ಇವುಗಳನ್ನು
ಗಮನಿಸುವುದು ಕಷ್ಟವೆ ಸರಿ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು ಕನಕಪುರದಲ್ಲಿ.
ವಿಶೇಷ ಮಾಹಿತಿ : ಬಹಳಷ್ಟು ಜಾತಿಯ ಗಂಡು ಚಿಟ್ಟೆಗಳಿಗೆ ಸುಗಂಧವನ್ನು ಬೀರುವ ಗ್ರಂಥಿಗಳಿರುತ್ತವೆ.
ಈ ಸುಗಂಧದಿಂದ ಗಂಡು ಚಿಟ್ಟೆಗಳು ಹೆಣ್ಣನ್ನು ಆಕರ್ಶಿಸುತ್ತವೆ.
ಭಾರತ, ಜಪಾನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಇವು ಕಂಡುಬರುತ್ತವೆ.
ಇವುಗಳು ಮಲೆನಾಡಿನ ಕಾಡುಗಳಲ್ಲಿ ಕಂಡುಬರುತ್ತವೆ. ಇವುಗಳು ಬಹಳ ವೇಗವಾಗಿ ಹಾರಬಲ್ಲವು. ಹೂವಿನ ಮೇಲೆ
ಕೂತು ಮಕರಂದವನ್ನು ಹೀರುವಾಗಲೂ ಇವುಗಳು ತಮ್ಮ ರೆಕ್ಕೆಗಳನ್ನು ಬಡಿಯುತ್ತಲೇ ಇರುತ್ತವೆ. ಇವುಗಳ ಮೇಲ್ಭಾಗದ
ರೆಕ್ಕೆಯು ಕಪ್ಪು ಬಣ್ಣ ಹೊಂದಿದ್ದು ಅಲ್ಲಲ್ಲಿ ನೀಲಿ ಬಣ್ಣದ ಚುಕ್ಕೆಗಳು, ಸಣ್ಣ ನೀಲಿ ಪಟ್ಟೆಗಳು
ಇರುತ್ತವೆ. ಇವುಗಳ ಕಣ್ಣು ಸ್ವಲ್ಪ ದೊಡ್ಡದಾಗಿರುತ್ತವೆ. ಇವುಗಳ ದೇಹದ ಮೇಲೂ ಉದ್ದವಾದ ನೀಲಿ ಮತ್ತು
ಕಪ್ಪು ಪಟ್ಟೆಗಳಿರುವುದನ್ನು ನೋಡಬಹುದು.
ವಿಶೇಷ ಮಾಹಿತಿ: ಈ ಜಾತಿಯ
ಗಂಡು ಚಿಟ್ಟೆಗಳು ಗುಂಪಿನಲ್ಲಿ ಬಂದು ತೇವವಾದ ಮಣ್ಣಿನ ಮೇಲೆ ಕುಳಿತು ನೀರನ್ನು ಹೀರುತ್ತವೆ.
ಕಾಮನ್ ಬಾರಾನ್ (Common baron)
ವೈಜ್ಞಾನಿಕ ಹೆಸರು - ಯುಥಾಲಿಯಾ ಅಕಾಂಥೆಯ
ಇವುಗಳು ನಿಂಫಲಿಡ್ಸ್ ಜಾತಿಗೆ ಸೇರಿದ ಚಿಟ್ಟೆಗಳು. ಇವುಗಳ ರೆಕ್ಕೆಯ ಅಗಲ
೬೮ - ೭೯ ಮಿ.ಮಿ. ಮೀಸೆ, ತಲೆ, ಎದೆ ಮತ್ತು ಹೊಟ್ಟೆ ಕಡು ಕಂದು ಬಣ್ಣವನ್ನು ಹೊಂದಿವೆ. ಇವುಗಳ ರೆಕ್ಕೆಯ
ಬಣ್ಣ ಕಡು ಕಂದು ಬಣ್ಣವಾಗಿದ್ದು ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಇವುಗಳ ರೆಕ್ಕೆಯ ಮೇಲ್ಭಾಗದ
ಮಧ್ಯದಲ್ಲಿ ಬಿಳಿ ಬಣ್ಣವನ್ನು ಗಮನಿಸಬಹುದು. ಇವುಗಳು ಸಾಮಾನ್ಯವಾಗಿ ಎತ್ತರದಲ್ಲಿ ಹಾರುವುದಿಲ್ಲಾ.
ಈ ಚಿಟ್ಟೆಗಳು ತಮ್ಮ ಪ್ರಾಂತ್ಯವನ್ನು ಕಾಪಾಡಿಕೊಳ್ಳಲು ಬೇರೆ ಚಿಟ್ಟೆಗಳೊಡನೆ ಜಗಳವಾಡುತ್ತವೆ. ಈ ಚಿಟ್ಟೆಗಳು
ಬಹಳ ವೇಗವಾಗಿ ಹಾರುತ್ತವೆ. ಇವುಗಳು ಹಾರುವ ಪಥ ಅನಿಶ್ಚಿತ.
ವಿಶೇಷ ಮಾಹಿತಿ: ಇವುಗಳು ತಮ್ಮ ಮೊಟ್ಟೆಗಳನ್ನು ಮಾವಿನ ಮರದ ಎಲೆಗಳ ಮೇಲಿಡುತ್ತವೆ.
ಈ ಮೊಟ್ಟೆಗಳಿಂದ ಹೊರಬಂದ ಮರಿಹುಳು ಈ ಮರದ ಎಲೆಗಳನ್ನು ತಿನ್ನುತ್ತವೆ.


























Awesome..
ReplyDeleteThanks
DeleteI don't know kannada but photos are awesome ...Nice clicks anand .
ReplyDeleteNice.
ReplyDeleteThis comment has been removed by the author.
ReplyDeleteBeautiful Pictures !
ReplyDeleteSuper....
ReplyDeleteBeautiful butterflies and helpful information .
ReplyDelete